Saturday, July 11, 2026
ಸುದ್ದಿ

ಗದ್ದೆಯಿಂದ ಗರ್ಭಗುಡಿಗೆ : ಶುದ್ಧನೈವೇದ್ಯ ಸಮರ್ಪಣಂ – ಯೋಜನೆ ಯಶಸ್ವಿಗಾಗಿ ಸೋದೆ ಶ್ರೀಗಳ ಪಾದಯಾತ್ರೆ -ಕಹಳೆ ನ್ಯೂಸ್

ಪುರಿಯ ಜಗನ್ನಾಥನಿಗೆ ದಿನಕ್ಕೊಂದು ಭತ್ತದ ತಳಿಯ ಭೋಗ್! ಪ್ರತಿದಿನ ಬೇರೆಯದೇ ತಳಿಯ ನೈವೇದ್ಯ. ಭತ್ತದ ಕಣಜವೆನಿಸಿದ ಒರಿಸ್ಸಾದ ಪುರಿ ಜಗನ್ನಾಥ ನಿಜವಾಗಿಯೂ ಭತ್ತದ ತಳಿ ಸಂರಕ್ಷಕ. ಹಾಗೆಂದೇ ಭತ್ತದ ವೈಜ್ಞಾನಿಕ ಹೆಸರೂ ’ಒರೈಜಾ ಸಟೇವಾ’ ಎಂದಾಗಿದ್ದು!

ಈ ಪರಿಯ ಭೋಗಸಮರ್ಪಣೆ ದೇಶದಲ್ಲೇನು ಜಗತ್ತಿನಲ್ಲೇ ಅಪರೂಪದ್ದು!

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಭಾರತದಲ್ಲಿ ಅನ್ನಬ್ರಹ್ಮ ಎಂದೇ ಪ್ರಖ್ಯಾತನಾದ ಉಡುಪಿಯ ಕೃಷ್ಣನಿಗೆ ಈ ನೈವೇದ್ಯ ಸಮರ್ಪಣೆ ಮಾಡಿದರೆ ಹೇಗೆ ಎಂಬ ಕನಸು ಚಿಗುರಿದ್ದು ಹಾದಿಗಲ್ಲು ’ನಡುವಿನಮನೆ ಸಂಸ್ಥಾನಂ’ ಅಭಯಲಕ್ಷ್ಮೀನೃಸಿಂಹ ದೇವಸ್ಥಾನದ ಧರ್ಮದರ್ಶಿ, ಸಂಸ್ಕೃತಿ ಚಿಂತಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರಲ್ಲಿ. ಅದಕ್ಕೆ ಕಸುವು ತುಂಬಿದ್ದು ಕೃಷಿ ಪ್ರಯೋಗ ಪರಿವಾರದ ಕಾರ್ಯಕರ್ತರಾದ ಸರು ದಿನೇಶ್‌, ಅರುಣ, ಚಕ್ಕೋಡಬೈಲು ಶ್ರೀವತ್ಸ. ಇವರೊಡನೆ ಕೈಜೋಡಿಸಿದವರು ಆ.ಶ್ರೀ. ಆನಂದ ಮತ್ತು ಕಾರ್ಕಳ ಶ್ರೀನಿವಾಸ ಭಟ್‌.

ತೀರ್ಥಹಳ್ಳಿ ಕುರುವಳ್ಳಿಯ ಎಂ. ಪುರುಷೋತ್ತಮರಾಯರ (1933-1998) ಸಾವಯವ ತಪಸ್ಸಿನ ಫಲವೇ ಕೃಷಿ ಪ್ರಯೋಗ ಪರಿವಾರ ಕರ್ನಾಟಕ. ಹೊರರಾಜ್ಯಗಳಲ್ಲೂ ಸಾವಯವ ಕೃಷಿ ಪದ್ಧತಿಯನ್ನು ಬಿತ್ತಿ ಬೆಳೆದ ರಾಯರು ಕೃಷಿಋಷಿ ಎಂದೇ ಎಲ್ಲೆಡೆ ಮಾನಿತರು.
ಸಾವಯವ ಕೃಷಿ ಮೂಲಕ ವಿಷರಹಿತ ಅಮೃತಾನ್ನ ಬೆಳೆದು ತಾನೂ ಉಂಡು ಉಳಿದವರಿಗೂ ಉಣ್ಣಿಸುವ ಯೋಜನೆಯನ್ನು ನಾಡಿನಾದ್ಯಂತ ಹರಡುವ ಕನಸು ಕಟ್ಟಿದ ರಾಯರು ತಮ್ಮ ಕೃಷಿ ಭೂಮಿಯನ್ನೇ ಇದಕ್ಕಾಗಿ ಮುಡಿಪಿಟ್ಟಾಗ ಜನ್ಮ ತಳೆದ ಸಂಸ್ಥೆ ಪುರುಷೋತ್ತಮರಾವ್ ಕೃಷಿ ಸಂಶೋಧನ ಪ್ರತಿಷ್ಠಾನ. ಸಾವಯವ ಕೃಷಿ ಪ್ರಾತ್ಯಕ್ಷಿಕೆ, ಅಳಿದು ಹೋಗುತ್ತಿರುವ ಭತ್ತದ ತಳಿ ಸಂರಕ್ಷಣೆಯ ಮೂಲಕ ಈ ಸಂಸ್ಥೆ ನಾಡಿನಾದ್ಯಂತ ಮನೆಮಾತು.
ಭತ್ತದ ತಳಿ ಸಂರಕ್ಷಣೆಯಲ್ಲಿ ಈ ಸಂಸ್ಥೆಯ ಜತೆ ಬಿ.ಕೆ. ದೇವರಾಯರು, ಶಿರಸಿಯ ಆರ‍್.ಜಿ. ಭಟ್ಟರು, ಕಾರ್ಕಳದ ಅಬೂಬಕರ‍್, ಕುಂಬಳೂರು ಆಂಜನೇಯ ಮತ್ತು ಮಂಡ್ಯದ ರಮೇಶ್ ಕೈ ಜೋಡಿಸಿದವರು.
ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿ ನೈವೇದ್ಯ ಸಮರ್ಪಣೆಯ ಕನಸು ನನಸು ಮಾಡಲು ಪರಮಾನುಗ್ರಹ ಮಾಡಿಡವರು ತ್ರೈಲೋಕ್ಯಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋದೆ ವಾದಿರಾಜ ಮಠದ ಪೂಜ್ಯ ವಿಶ್ವವಲ್ಲಭತೀರ್ಥ ಶ್ರೀಪಾದರು. ಧರ್ಮ, ಸಂಸ್ಕೃತಿ, ಶಿಕ್ಷಣ, ಕಲೆ, ಕೃಷಿ, ಗೋಸೇವೆ ಹೀಗೆ ಹಲವು ಮುಖದಲ್ಲಿ ಈಶ ಮತ್ತು ದೇಶ ಸೇವೆಯಲ್ಲಿ ತೊಡಗಿರುವ ತರುಣಯತಿ ಇವರು. ನಮ್ಮ ವಿನಂತಿಯಂತೆ

2022 ರಲ್ಲಿಯೇ ಸಾವಯವ ರೈತರಿಗೆ ಬೊಗಸೆ ಬೀಜ ಪ್ರದಾನ ಮಾಡಿ ನೀವು ಬೆಳೆಯಿರಿ ನಿಮ್ಮೊಡನೆ ನಾವಿದ್ದೇವೆ ಎಂದು ನೀಡಿದ ಭರವಸೆ ರೈತರಲ್ಲಿ ಹುಮ್ಮಸ್ಸು ತುಂಬಿತು.

ಈ ಯೋಜನೆಗೆ ’ಶುದ್ಧ ನೈವೇದ್ಯ ಸಮರ್ಪಣಂ’ ಎಂದು ನಾಮಕರಣ ಮಾಡಿದ ಶ್ರೀಪಾದರು ನಾವು ಬೆಳೆದ ವಿಷಮುಕ್ತ  ಅನ್ನ – ಅನ್ನಬ್ರಹ್ಮ ಶ್ರೀಕೃಷ್ಣನಿಗೆ ಸಮರ್ಪಣೆ ಮಾಡುವ ಮೂಲಕ ಅನ್ನ ಪ್ರಸಾದ ರೂಪ ತಾಳುವುದೆಂದು ಹರಸಿದರು.

ಮೇ 28 (2026) ಉಡುಪಿ ಸೋದೆ ಮಠದಲ್ಲಿ ಶಿವಮೊಗ್ಗ, ಉಡುಪಿ, ಮಂಗಳೂರು, ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ, ಹಾಸನ, ಮಂಡ್ಯ ಹೀಗೆ ಹತ್ತು ಹಲವು ಜಿಲ್ಲೆಗಳ ಇನ್ನೂರಕ್ಕೂ ಹೆಚ್ಚು ಸಾವಯವ ರೈತರಿಗೆ ಬೊಗಸೆ ಬೀಜ ಪ್ರದಾನ ಮಾಡಿ, ನೀವು ಬೆಳೆದ ಬೆಳೆಗೆ ’ಗದ್ದೆಯಿಂದ ಗರ್ಭಗುಡಿಗೆ’ ಪ್ರವೇಶಿಸುವ ಮೂಲಕ ಭಗವದರ್ಪಣೆಯ ಭಾಗ್ಯ ದೊರೆವುದೆಂದು ಹರಸಿದರು.

ಶುದ್ಧ ಆಹಾರದಿಂದ ಸುದೃಢ ಜೀವನ ಅದರಿಂದ ಸಮೃದ್ಧ, ಸಮರ್ಥ ದೇಶ ನಿರ್ಮಿತಿಯ ಮಹದಾಸೆಯ ಈ ಯೋಜನೆ ಸಫಲವಾಗಲು ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಮಾಡುವುದಾಗಿಯೂ ಘೋಷಿಸಿದ್ದು ಸಾವಯವ ಕೃಷಿಕರ ಉತ್ಸಾಹವನ್ನು ಇಮ್ಮಡಿಸಿತು.

ಪೂಜ್ಯ ಸೋದೆ ಶ್ರೀಪಾದರು ಅಂದು ಭಾವಿಸಮೀರ ವಾದಿರಾಜರು ಕೃಷಿ ಕುರಿತು ತೋರಿದ ಕಾಳಜಿಯನ್ನು ಇಂದೂ ಪ್ರಕಟಿಸುವಲ್ಲಿ ಉತ್ಸಾಹ ತೋರಿದ್ದು ಸಾವಯವ ಕೃಷಿಕರ ಸೌಭಾಗ್ಯ. 2028-30 ರ ಸೋದೆ ಪರ್ಯಾಯದಲ್ಲಿ ’ಶುದ್ಧ ನೈವೇದ್ಯ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ.

ರೈತರಿದ್ದಲ್ಲಿಗೇ ತೆರಳಿ ’ನೀವು ಬೆಳೆದು ತನ್ನಿ ಅನ್ನಬ್ರಹ್ಮನಿಗೆ ಸಮರ್ಪಿಸಿ ಧನ್ಯರಾಗಿ’ ಎಂಬ ಕರೆಯೊಂದಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಳವಂಕ (ಜುಲೈ 12 ರ ಭಾನುವಾರ) ಮತ್ತು ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ (ಜುಲೈ 13 ಸೋಮವಾರ) ಮಧ್ಯಾಹ್ನ 3.30 ರಿಂದ ಪಾದಯಾತ್ರೆ ಮಾಡಲಿದ್ದಾರೆ.

ದಕ್ಷಿಣ ಭಾರತದಲ್ಲೇ ಮೊದಲೆನಿಸುವ ಈ ಯೋಜನೆಯ ಯಶಸ್ಸು ಸಾವಯವ ರೈತರನ್ನು ಅವಲಂಬಿಸಿದ್ದು ಅಹಾರ ಬೆಳೆವ ಭೂಮಿ ಕಡಿಮೆಯಾಗಿ ವಾಣಿಜ್ಯ ಬೆಳೆಯತ್ತ ರೈತರು ಮುಖಮಾಡಿರುವ ಈ ವಿಕಟ ಸಂದರ್ಭದಲ್ಲಿ ರೈತ ಜಾಗೃತಿಯ ಪಾದಯಾತ್ರೆ ಅದೂ ಯತಿಯೊಬ್ಬರ ನೇತೃತ್ವದಲ್ಲಿ ಎಂಬುದು ’ಧರ್ಮ ಎಂದರೆ ಕೇವಲ ವಿಚಾರವಲ್ಲ ಅದು ಆಚಾರ’ವೆಂಬುದನ್ನು ನಿರೂಪಿಸುತ್ತದೆ ಎಂಬುದು ಅತಿಶಯೋಕ್ತಿಯಲ್ಲ.