Saturday, July 11, 2026
ಬೆಂಗಳೂರುರಾಜ್ಯಸುದ್ದಿ

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪಂಚಾಯತ್‌ ಚುನಾವಣೆ: ಈಶ್ವರ ಖಂಡ್ರೆ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ಬಹುತೇಕ ಪಂಚಾಯತ್‌ಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಪಂಚಾಯತ್‌ಗಳ ಮೇಲ್ದರ್ಜೆಯಿಂದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಾಗಿ ಬಂದಿದ್ದು, ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ, ಮೀಸಲಾತಿ ನಿರ್ಧರಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗುವುದು. ಆಯೋಗವು 45 ದಿನಗಳಲ್ಲಿ ಚುನಾವಣೆ ನಡೆಸುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಿಬ್ಬಂದಿ ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕಾಲಾವಕಾಶ ಕೇಳಲಾಗಿದೆ ಎಂದು ತಿಳಿಸಿದರು.

ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆ ಹುಟ್ಟುಹಾಕಿದ್ದರು. ಕರ್ನಾಟಕದಲ್ಲಿ 1980ರಲ್ಲಿ ನಜೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿದರೆ, ದಿವಂಗತ ಪ್ರಧಾನಿ ರಾಜೀವ್ ಗಾಂಧೀಜಿಯವರು ದೇಶದಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು 1989ರಲ್ಲಿ 64ನೇ ಸಾಂವಿಧಾನಿಕ ತಿದ್ದುಪಡಿಗೆ ಪ್ರಯತ್ನ ಮಾಡಿದ್ದರು. ನಂತರ 1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿ ಮಾಡಿ, 1993ರ ಏಪ್ರಿಲ್ 24 ರಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಅಂದರೆ ಗ್ರಾಮಗಳ ಆಡಳಿತವನ್ನು ಅದೇ ಗ್ರಾಮದವರೇ ನಿರ್ವಹಿಸಬೇಕು ಎಂಬುದೇ ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಮನೆ ಮನೆಗೆ ಇ-ಸ್ವತ್ತು:
ಇನ್ನು ಇ-ಸ್ವತ್ತಿಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳಿದ್ದು, ಸಾಕಷ್ಟು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಮುಗಿದ ನಂತರ, ಈ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಿ, ಎಲ್ಲಾ ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಯಾವುದೇ ತೊಡಕಾಗದಂತೆ ಮನೆ ಬಾಗಿಲಿಗೇ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗುವುದು ಎಂದರು. ಬಿ ಖರಾಬು ಜಮೀನು ಬಳಸಿಕೊಂಡು ಲೇಔಟ್ ನಿರ್ಮಿಸಿದ್ದರೆ ಅಲ್ಲಿ ಇ-ಸ್ವತ್ತು ನೀಡಲಾಗುವುದಿಲ್ಲ. ಇದಕ್ಕೆ ಕಂದಾಯ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಬೇಕಾಗುತ್ತದೆ ಎಂದರು.

ಕೇಂದ್ರದಿಂದ ದುಡ್ಡು ಬಂದಿಲ್ಲ
ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಾದ 2,186.20 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದರು. ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಹಣ ಬಿಡುಗಡೆ ಮಾಡುವುದಿಲ್ಲ ಎನ್ನುವುದು ಸರಿಯಲ್ಲ. ರಾಜ್ಯದ ಸಂಸತ್ ಸದಸ್ಯರು ಒಕ್ಕೂರಲಿನಿಂದ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.