ಕೆಂಪುಕೋಟೆಗೆ ಬಾಂಬ್ ಬೆದರಿಕೆ: ತೀವ್ರ ಶೋಧದ ಬಳಿಕ ಹುಸಿ ಕರೆ ಎಂದು ದೃಢಪಡಿಸಿದ ಪೊಲೀಸರು – ಕಹಳೆ ನ್ಯೂಸ್

ನವದೆಹಲಿ: ಐತಿಹಾಸಿಕ ಕೆಂಪುಕೋಟೆಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ನೀಡಿದ ಬೆದರಿಕೆ ಕರೆ ಭಾರಿ ಆತಂಕ ಸೃಷ್ಟಿಸಿದೆ. ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳ ಸುದೀರ್ಘ ತಪಾಸಣೆಯ ಬಳಿಕ ಇದು ಹುಸಿ ಕರೆ ಎಂದು ದೃಢಪಟ್ಟಿದೆ.
ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಅಪರಿಚಿತನೊಬ್ಬ, ದೆಹಲಿಯ ಕೆಂಪುಕೋಟೆಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದಿದ್ದ. ತಕ್ಷಣವೇ ಎಚ್ಚೆತ್ತ ಮುಂಬೈ ಪೊಲೀಸರು ಈ ಮಾಹಿತಿಯನ್ನು ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಿದರು. ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು, ಕೆಂಪುಕೋಟೆ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ತೀವ್ರಗೊಳಿಸಿದರು.
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಹಾಯದಿಂದ ಇಡೀ ಆವರಣವನ್ನು ಜಾಲಾಡಿದ ಭದ್ರತಾ ಸಿಬ್ಬಂದಿ, ಹಲವು ಗಂಟೆಗಳ ಕಾಲ ಸಮಗ್ರ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿ ಕರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.









