
ಹಾವೇರಿ: ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ನದಿ ತೀರದ ಗ್ರಾಮಗಳ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ರೈತರು ವರದಾ ನದಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಸುಮಾರು ಶೇಕಡಾ 50ರಷ್ಟು ಮಳೆ ಕೊರತೆ ಮಳೆ ಕೊರತೆ ಆಗುತ್ತಿದೆ ಎನ್ನಲಾಗಿದೆ. ಈ ನಡುವೆ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಆದರೆ ಮುಂಗಾರು ಕೈಕೊಟ್ಟಿರುವುದರಿಂದ ಅನೇಕ ರೈತರು ಇನ್ನೂ ಭತ್ತದ ನಾಟಿ ಕಾರ್ಯ ಆರಂಭಿಸಿಲ್ಲ. ಜಿಲ್ಲೆಯ ಕೆರೆಗಳನ್ನು ಏತನೀರಾವರಿ ಯೋಜನೆಯಡಿ ತುಂಬಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬಾಳಂಬೀಡ ಏತನೀರಾವರಿ ಯೋಜನೆ ಶುರುವಾಗಿದ್ದು, ಸುಮಾರು 180 ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ. ಮಳೆಯ ಕೊರತೆಯ ನಡುವೆಯೂ ನೀರಾವರಿ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಕೆರೆಗಳಿಗೆ ನೀರು ಹರಿಸುವ ಕೆಲಸವನ್ನು ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.









