
ಒಮನ್: ಹಾರ್ಮುಜ್ ಜಲಸಂಧಿಯ ಸಮೀಪ ಒಮನ್ ಕರಾವಳಿಯಲ್ಲಿ ಸಂಚರಿಸುತ್ತಿದ್ದ ತೈಲ ಟ್ಯಾಂಕರ್‌ಗೆ ಅಪರಿಚಿತ ಪ್ರೊಜೆಕ್ಟೈಲ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಈ ಬಗ್ಗೆ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಮಾಹಿತಿ ನೀಡಿದೆ. ಒಮಾನ್‌ನ ಲಿಮಾ ಪ್ರದೇಶದಿಂದ ಸುಮಾರು 8 ನಾಟಿಕಲ್ ಮೈಲು (14.816 ಕಿಲೋಮೀಟರ್) ದೂರದಲ್ಲಿ ದಕ್ಷಿಣ ದಿಕ್ಕಿನತ್ತ ಸಾಗುತ್ತಿದ್ದ ಟ್ಯಾಂಕರ್‌ಗೆ ಈ ಅಪಘಾತ ಸಂಭವಿಸಿದೆ. ಅಪರಿಚಿತ ವಸ್ತು ಟ್ಯಾಂಕರ್‌ನ ಬದಿಗೆ ಡಿಕ್ಕಿ ಹೊಡೆದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ ಎಂದು ಯುಕೆಎಮ್‌ಟಿಒ ತನ್ನ X ಖಾತೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ. ಸಾವುನೋವು ಅಥವಾ ಪರಿಸರ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಟ್ಯಾಂಕರ್‌ನ ಸ್ಥಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಎಲ್ಲಾ ಹಡಗುಗಳು ಎಚ್ಚರಿಕೆಯಿಂದ ಸಾಗುವಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.








