
ಮುಂಬೈ: ಕಳೆದ ಮೂರು ದಿನಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ, ರೈಲು ಸೇವೆ ಮತ್ತು ದೈನಂದಿನ ಬದುಕಿನ ಮೇಲೆ ಮಳೆಯ ಪರಿಣಾಮ ತೀವ್ರವಾಗಿದೆ.
ಈ ದುರ್ಘಟನೆಗಳ ನಡುವೆ ಭಿವಂಡಿಯಲ್ಲಿ ಮನಕಲಕುವ ಘಟನೆ ನಡೆದಿದೆ. ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ 13 ವರ್ಷದ ಬಾಲಕ ಮುಹಮ್ಮದ್ ಅಬೂಝರ್ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ನೀರಿನ ರಭಸಕ್ಕೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ.
ಕಳೆದ ಆರು ದಿನಗಳಲ್ಲಿ ಮುಂಬೈ ನಗರದಲ್ಲಿ ಮಳೆಯ ಅವಾಂತರಕ್ಕೆ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ಮಳೆಯ ಕಾರಣ ಹಲವೆಡೆ ಭೂಕುಸಿತ, ನೀರು ನಿಲ್ಲುವುದು ಮತ್ತು ಅಪಘಾತಗಳು ಹೆಚ್ಚಾಗಿವೆ.








