Monday, September 7, 2026
ಬೆಂಗಳೂರುರಾಜ್ಯಸುದ್ದಿ

ಕಿಂಚಿತ್ ಅಮಲು ಬೆರೆಸಿದರೂ ಗುಟ್ಕಾ, ಪಾನ್ ಮಸಾಲಾ ಕಂಪ್ಲೀಟ್ ಬ್ಯಾನ್: ಡಿಕೆಶಿ ಎಚ್ಚರಿಕೆ -ಕಹಳೆ ನ್ಯೂಸ್

ಬೆಂಗಳೂರು: ಪಾನ್ ಮಸಾಲಾ  ಗುಟ್ಕಾ ಹಾಗೂ ಅಡಿಕೆ ಪದಾರ್ಥಗಳಲ್ಲಿ ಸ್ವಲ್ಪ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ತಕ್ಷಣವೇ ನಿಲ್ಲದಿದ್ದರೆ ರಾಜ್ಯದಲ್ಲಿ   ಎಲ್ಲಾ ರೀತಿಯ ಪಾನ್ ಮಸಾಲಾ ಹಾಗೂ ಗುಟ್ಕಾಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಎಚ್ಚರಿಕೆ ನೀಡಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನ ಹಾಗೂ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ದ ಅಂಗವಾಗಿ ಬೆಂಗಳೂರಿನ  ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ದಲ್ಲಿ ಡಿಕೆಶಿ ಮಾತನಾಡಿದರು.

ಜಾಹೀರಾತು

ಮಾದಕದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ನಾವು ನಿರಂತರವಾಗಿ ಕಠಿಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇಂದು ನೀವೆಲ್ಲರೂ ಸೇರಿ ಹಮ್ಮಿಕೊಂಡಿರುವ ಈ ಸಮಾವೇಶ ಸ್ವಾಗತಾರ್ಹ. ವ್ಯಸನಮುಕ್ತ ನಾಳಿನ ಸುಂದರ ಕನಸನ್ನು ನನಸಾಗಿಸಲು ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ನಾಗರಿಕರು ಒಟ್ಟಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೀವೆಲ್ಲರೂ ಈ ಅಭಿಯಾನದ ರಾಯಭಾರಿಗಳು. ಮಾದಕ ವ್ಯಸನ ತಡೆಯುವುದು ಇಂದಿನ ದೊಡ್ಡ ಸವಾಲಾಗಿದ್ದು, ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜೀವ ರಕ್ಷಣೆಯ ವೃತ್ತಿ ಆಯ್ಕೆ ಮಾಡಿಕೊಂಡಿರುವ ನಿಮಗೆ ನನ್ನ ಅಭಿನಂದನೆಗಳು ಎಂದು ಸಿಎಂ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.  

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ದೇಶದಲ್ಲೇ ಅತಿ ದೊಡ್ಡ ಆರೋಗ್ಯ ವಿವಿಯಾಗಿದ್ದು, ಅತಿ ಹೆಚ್ಚು ವೈದ್ಯರನ್ನು ದೇಶಕ್ಕೆ ನೀಡಿದೆ. ಈ ವಿವಿಯನ್ನು ಆರಂಭಿಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದಗಳು. ನಮ್ಮ ರಾಜ್ಯದಲ್ಲಿ ಬರೋಬ್ಬರಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಇಷ್ಟು ಕಾಲೇಜುಗಳಿಲ್ಲ. ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಬೆಳವಣಿಗೆಯ ಕುರಿತು ಪ್ರಮುಖ ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಶೀಘ್ರದಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಹೈಟೆಕ್ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು ಪ್ರಕಟಿಸಿದರು.

ಕರ್ನಾಟಕದಲ್ಲಿ ಇರುವಷ್ಟು ಅತ್ಯಾಧುನಿಕ ಆಸ್ಪತ್ರೆಗಳು ಬೇರೆ ಎಲ್ಲೂ ಇಲ್ಲ. ಹೀಗಾಗಿ ಕರ್ನಾಟಕ ದೇಶದ ವೈದ್ಯಕೀಯ ರಾಜಧಾನಿಯಾಗಿದೆ. ಬೆಂಗಳೂರಿನ ಅದ್ಭುತ ಹವಾಮಾನದಿಂದಾಗಿ ಇದನ್ನು ಹವಾನಿಯಂತ್ರಿತ ನಗರ (Air-conditioned city) ಎಂದೂ ಕರೆಯಲಾಗುತ್ತದೆ ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ಉಪರಾಷ್ಟ್ರಪತಿಗಳಾದ ಸಿ. ಪಿ. ರಾಧಾಕೃಷ್ಣನ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಅವರ ಘನ ಉಪಸ್ಥಿತಿಯಲ್ಲಿ, ಆರೋಗ್ಯಕರ, ಸುರಕ್ಷಿತ ಮತ್ತು ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಈ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡಲಾಯಿತು.