ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ -ಕಹಳೆ ನ್ಯೂಸ್

ಉಡುಪಿ : ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಬೆಳಗ್ಗೆ ಪತ್ನಿಯೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.

ದೇವಾಲಯದ ಹಿರಿಯ ಅರ್ಚಕರಾದ ನರಸಿಂಹ ಅಡಿಗ ಹಾಗೂ ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು ನೆರವೇರಿದವು. ಪೂಜೆ ಬಳಿಕ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಉಪಮುಖ್ಯಮಂತ್ರಿಗಳಿಗೆ ದೇವಿಯ ಪ್ರಸಾದ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಮಾಧ್ಯಮ ಜೊತೆ ಮಾತನಾಡಿದ ಅವರು ಕೊಲ್ಲೂರು ದೇವಸ್ಥಾನಕ್ಕೆ ಬರುವ ಭಕ್ತರಿಗೆ ದರ್ಶನ, ಪಾರ್ಕಿಂಗ್, ವಸತಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲಾಗಿದ್ದು,ಮುಂದೆ ಅದನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಸಂಬಂಧಿಸಿ ಒತ್ತುವರಿಯಾಗಿರುವ ಎಲ್ಲಾ ಜಮೀನುಗಳನ್ನು ತೆರವುಗೊಳಿಸಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಭಿಲಾಷ್ ಪಿ.ವಿ., ಸುರೇಂದ್ರ ಶೆಟ್ಟಿ, ರಘುರಾಮ್ ದೇವಾಡಿಗ, ಸುಧಾ ಕೆ., ಧನಾಕ್ಷಿ ಪೂಜಾರಿ, ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ರೈ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.










