ವಿಧಾತ್ರಿ ಕಲಾವಿದೆರ್ ಕುಡ್ಲ ಕಲಾ ಸಂಸ್ಥೆಯ ಆಶ್ರಯದಲ್ಲಿ ನಾಳೆ ವಿಧಾತ್ರಿ ಸಂಭ್ರಮ -2026; ‘ಜೈ ಹನುಮಾನ್’ ನಾಟಕ ಪ್ರದರ್ಶನ -ಕಹಳೆ ನ್ಯೂಸ್
ಮಂಗಳೂರು : ಕಳೆದ 17 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವಿಧಾತ್ರಿ ಕಲಾವಿದೆರ್ ಕುಡ್ಲ (ರಿ.) ಸಂಸ್ಥೆಯ ವತಿಯಿಂದ ವಿಧಾತ್ರಿ ಸಂಭ್ರಮ-2026 ಕಾರ್ಯಕ್ರವು ಜೂ. 28ರಂದು ಸಂಜೆ 4:30ಕ್ಕೆ ನಗರದ ಪುರಭವನ (ಟೌನ್‌ಹಾಲ್) ನಲ್ಲಿ ಜರಗಲಿದೆ ಮತ್ತು ಚಿದಾನಂದ ಅದ್ಯಪಾಡಿ ಸಾರಥ್ಯದಲ್ಲಿ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ, ಭರತ್ ಎಸ್. ಕರ್ಕೇರ ರಚನೆಯ ತುಳು ಮತ್ತು ಕನ್ನಡ ಭಾಷೆಯಲ್ಲಿ ರಚನೆಯಾದ ‘ಜೈ ಹನುಮಾನ್’ ನಾಟಕ ಪ್ರದರ್ಶನ ನಡೆಯಲಿದೆ.
ತುಳು ರಂಗಭೂಮಿ ಕಲಾವಿದ ಚಿದಾನಂದ ಅದ್ಯಪಾಡಿ ಈ ಕುರಿತು ಮಾಹಿತಿ ನೀಡಿ, ವಿಧಾತ್ರಿ ಕಲಾವಿದೆರ್ ಕುಡ್ಲ ತಂಡವು ಕಳೆದ 17 ವರ್ಷಗಳಿಂದ ತುಳುನಾಡಿನಲ್ಲಷ್ಟೇ ಅಲ್ಲದೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಮುಂಬಯಿ ಸೇರಿದಂತೆ ವಿವಿಧೆಡೆಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಗಳಿಸಿದೆ ಎಂದು ತಿಳಿಸಿದರು.
ಐತಿಹಾಸಿಕ, ಜಾನಪದ ಹಾಗೂ ಹಾಸ್ಯಮಯ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ತಂಡವು ಈ ಬಾರಿ ವಿಶೇಷ ವೆಚ್ಚದಲ್ಲಿ ಅದ್ದೂರಿ ರಂಗ ವಿನ್ಯಾಸ ಹಾಗೂ ಸಿನಿಮೀಯ ಮಾದರಿಯ ನಿರೂಪಣೆಯೊಂದಿಗೆ ‘ಜೈ ಹನುಮಾನ್’ ಎಂಬ ನಾಟಕವನ್ನು ಪ್ರದರ್ಶಿಸಲಿದೆ ಎಂದು ಹೇಳಿದರು.
ತುಳುನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆಯ ಹರಿಕಾರರೆಂದು ಗುರುತಿಸಿಕೊಂಡಿರುವ ಕಲಾ ಸಂಘಟಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ನಾಟಕ ಮೂಡಿ ಬಂದಿದ್ದು, ಈಗಾಗಲೇ ಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ‘ವಿಧಾತ್ರಿ ಸಂಭ್ರಮ -2026 ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ತುಳುನಾಡಿನ ಕಲಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಈ ನಾಟಕಕ್ಕೆ ಉಚಿತ ಪ್ರವೇಶವಿದ್ದು, ತುಳುನಾಡಿನ ವಿವಿಧ ಸಂಘ-ಸಂಸ್ಥೆಗಳು ಹಾಗೂ ನಾಟಕಾಸಕ್ತರು ಆಗಮಿಸಿ ನಾಟಕವನ್ನು ವೀಕ್ಷಿಸಿ ಸಹಕರಿಸುವಂತೆ ಆಯೋಜಕರು ಕೋರಿದ್ದಾರೆ.











