
ಬೆಂಗಳೂರು: ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಮರು ಪರಿಶೀಲಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದು ಹಿಂದಿ ವಿವಾದಕ್ಕೆ ಈಗ ಮತ್ತೊಂದು ತಿರುವು ಲಭ್ಯವಾಗಿದೆ.
ಈ ಸಂಬಂಧ ಲೋಕ ಭವನದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಲಾಗಿದ್ದು ಈ ನಿರ್ಧಾರವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪ್ರಭುಶಂಕರ್ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಮಾರ್ಚ್ 27ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು, 10ನೇ ತರಗತಿ ವಿದ್ಯಾರ್ಥಿಗಳಿಗೆ 100 ಅಂಕಗಳಿರುವ ತೃತೀಯ ಭಾಷಾ (ಹಿಂದಿ) ವಿಷಯಕ್ಕೆ ಅಂಕ ನೀಡುವುದಿಲ್ಲ. ಬದಲಾಗಿ ಗ್ರೇಡ್ ನೀಡಲಾಗುತ್ತದೆ ಎಂದು ಘೋಷಿಸಿದ್ದರು. ಇದರೊಂದಿಗೆ, ವಿದ್ಯಾರ್ಥಿಗಳಿಗೆ ಒಟ್ಟು 625 ಅಂಕಗಳ ಬದಲು 525 ಅಂಕಗಳಿಗೆ ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಈ ವಿಚಾರ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಪತ್ರದಲ್ಲಿ ಏನಿದೆ?
– ಹಿಂದಿಗೆ ಅಂಕ ಬದಲು ಗ್ರೇಡ್ ನೀಡುವ ನಿರ್ಧಾರವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು
– ಕೇವಲ ಗ್ರೇಡ್ ನೀಡುವ ಕ್ರಮವು ವಿಷಯದ ಶೈಕ್ಷಣಿಕ ಮಹತ್ವವನ್ನು ಕಡಿಮೆ ಮಾಡಬಹುದು
– ಗ್ರೇಡಿಂಗ್‌ನಿಂದಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು
– ಈ ನೀತಿಯ ದೀರ್ಘಕಾಲೀನ ಪರಿಣಾಮಗಳು ಶಿಕ್ಷಣದ ಗುಣಮಟ್ಟ ಮತ್ತು ಸಮಗ್ರತೆಗೆ ಧಕ್ಕೆ ಆಗಬಹುದು
– ಸಂಬಂಧಿಸಿದವರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು
ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ 7.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಇಂಗ್ಲಿಷ್ (32,000) ಮತ್ತು ಕನ್ನಡ (11,400) ಇದೆ. ಉರ್ದು, ಸಂಸ್ಕೃತ, ತುಳು, ಕೊಂಕಣಿ ಮತ್ತು ಮರಾಠಿ ಕೂಡ ತೃತೀಯ ಭಾಷೆಗಳ ಪಟ್ಟಿಯಲ್ಲಿ ಇದೆ. ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬುದು ಸರ್ಕಾರದ ವಾದ.
ಆದರೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಅಸೋಸಿಯೇಷನ್ ಫಾರ್ ಪ್ರಿಸರ್ವೇಶನ್ ಆಫ್ ಲೋಕಲ್ ಲ್ಯಾಂಗ್ವೇಜ್ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಹಿಂದಿ ಸೇರಿದಂತೆ ತೃತೀಯ ಭಾಷೆಯ ಪರಿಕಲ್ಪನೆಯನ್ನು ಭಾಷಾ ವೈವಿಧ್ಯತೆ, ಅರಿವು ಮತ್ತು ಬೌದ್ಧಿಕ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಳವಡಿಸಿಕೊಳ್ಳಲಾಗಿತ್ತು. ಆದರೆ, ಸರ್ಕಾರದ ನಿರ್ಧಾರದಿಂದ ಇದಕ್ಕೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿತ್ತು.
ಈ ಪತ್ರವನ್ನು ಪರಿಶೀಲಿಸಿರುವ ರಾಜ್ಯಪಾಲರು ಅಂಕಗಳ ಬದಲು ಕೇವಲ ಗ್ರೇಡ್ ನೀಡುವ ಕ್ರಮವು ವಿಷಯದ ಶೈಕ್ಷಣಿಕ ಮಹತ್ವವನ್ನು ಕಡಿಮೆ ಮಾಡಬಹುದು. ವಿದ್ಯಾರ್ಥಿಗಳ ಆಸಕ್ತಿ ಹಾಗೂ ತೊಡಗಿಸಿಕೊಳ್ಳುವಿಕೆಯನ್ನು ಹಾನಿಗೊಳಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರು, ಪಾಲಕರು ಮತ್ತು ಶಿಕ್ಷಣ ತಜ್ಞರಲ್ಲಿಯೂ ಈ ಸಂಬಂಧ ಆತಂಕ ಮೂಡಿದ್ದು ಈ ನೀತಿಯ ದೀರ್ಘಕಾಲೀನ ಪರಿಣಾಮಗಳು ಶಿಕ್ಷಣದ ಗುಣಮಟ್ಟ ಮತ್ತು ಸಮಗ್ರತೆಗೆ ಧಕ್ಕೆ ಆಗಬಹುದೆಂದು ರಾಜ್ಯಪಾಲರು ಅಭಿಮತ ವ್ಯಕ್ತಪಡಿಸಿದ್ದು ನಿರ್ಣಯವನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಲೋಕಭವನದಿಂದ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿದ ಪತ್ರದಲ್ಲಿ ಅಭಿಪ್ರಾಯಪಡಲಾಗಿದೆ.
ಲೋಕಭವನವು ಶಾಲಾ ಶಿಕ್ಷಣ ಇಲಾಖೆ ಹಾಗೂ ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಹಾಗೂ ರಾಜ್ಯದ ಶಿಕ್ಷಣ ಗುರಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ವಿನಂತಿಸಿದೆ.









