
ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನಿರ್ಣಾಯಕ ಹಾಗೂ ಮಹತ್ವದ್ದಾಗಿ ಪರಿಣಮಿಸಿದ್ದು ಉಪಚುನಾವಣೆ ಗೆಲುವಿಗೆ ಸರ್ವ ಪ್ರಯತ್ನಗಳನ್ನೂ ಪ್ರಾರಂಭಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಜಯೇಂದ್ರ ಉಸ್ತುವಾರಿಯಲ್ಲಿ ನಡೆದ ಕೆ.ಆರ್.ಪೇಟೆ ಹಾಗೂ ಶಿರಾ ಉಪಚುನಾವಣೆಯ ಗೆಲುವಿನ ಕ್ರೆಡಿಟ್ ಅವರಿಗೆ ಸಂದಿತ್ತು. ಆದರೆ, ರಾಜ್ಯಾಧ್ಯಕ್ಷರಾದ ನಂತರ ಎದುರಾದ ಚುನಾವಣೆಗಳಲ್ಲಿ ವಿಜಯೇಂದ್ರ ಕಾರ್ಯತಂತ್ರ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಈ ಬಾರಿ ಹಿನ್ನಡೆ ಆಗದಂತೆ ಅವರು ಕಾರ್ಯತಂತ್ರ ರೂಪಿಸಿದ್ದಾರೆ.
ಉಪಚುನಾವಣೆ ಘೋಷಣೆಯಾದ ಮೊದಲ ದಿನದಿಂದಲೇ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಇದರ ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ತಮ್ಮ ಸಂಪೂರ್ಣ ಶಕ್ತಿಯನ್ನು ಪಕ್ಷ ಹಾಗೂ ಪುತ್ರನ ಪರವಾಗಿ ವಿನಿಯೋಗಿಸಲು ಮುಂದಾಗಿದ್ದು ಖುದ್ದು ಚುನಾವಣಾ ಕಣದಲ್ಲಿ ನಿಂತು ತಂತ್ರಗಾರಿಕೆಯನ್ನು ಪ್ರಾರಂಭಿಸಿದ್ದಾರೆ. ಪಕ್ಷದ ಹಿರಿಯರು, ಜಾತಿವಾರು ಪ್ರಬಲವಾಗಿರುವ ನಾಯಕರು ಹಾಗೂ ಮುಖಂಡರನ್ನು ಪ್ರತಿ ಕ್ಷೇತ್ರಕ್ಕೂ ನಿಯೋಜಿಸಲಾಗಿದ್ದು ಗೆಲುವಿಗಾಗಿ ಶ್ರಮಿಸಲಾಗುತ್ತಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯ ಮಧ್ಯೆಯೂ ಸೋಲುಂಟಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರೂ ಸಂಖ್ಯಾಬಲದಲ್ಲಿ ಇಳಿಕೆಯಾಗಿತ್ತು. ರಾಜಾ ವೆಂಕಟಪ್ಪ ನಾಯಕ ಅವರ ಸಾವಿನಿಂದ ತೆರವಾದ ಸುರಪುರ ವಿಧಾನಸಭಾ ಕ್ಷೇತ್ರ, ಬಸವರಾಜ ಬೊಮ್ಮಾಯಿ, ಇ.ತುಕಾರಾಂ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ನಡೆದ ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಸೋಲನ್ನು ಅನುಭವಿಸಬೇಕಾಯಿತು.
ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಸಾಮಾನ್ಯವಾದರೂ ಭವಿಷ್ಯದಲ್ಲಿ ತಮ್ಮ ನಾಯಕತ್ವವನ್ನು ಸಾಬೀತು ಮಾಡಬೇಕಾದರೆ ಈ ಎರಡು ಕ್ಷೇತ್ರಗಳಲ್ಲಿ ವಿಜಯ ಸಾಧಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕಡೆಯ ಪಕ್ಷ ಒಂದು ಕಡೆ ಗೆದ್ದರೂ ಅವರು ಸ್ವಪಕ್ಷೀಯರ ಆಂತರಿಕ ಹೊಡೆತದಿಂದ ಬಚಾವ್ ಆಗಬಹುದೆಂದು ವ್ಯಾಖ್ಯಾನಿಸಲಾಗುತ್ತಿದೆ.









