ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ಖಂಡಾಂತರ ಕ್ಷಿಪಣಿ ದಾಳಿ : ಎಲ್ಲ ಮಿಸೈಲ್‌ಗಳನ್ನೂ ಹೊಡೆದುರುಳಿಸಿದ ಅಮೆರಿಕ – ಕಹಳೆ ನ್ಯೂಸ್

ವಾಷಿಂಗ್ಟನ್: ಅಮೆರಿಕ – ಇರಾನ್ ನಡುವೆ ದಾಳಿ ಪ್ರತಿದಾಳಿ ಶುರುವಾಗಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಏರ್ಪಟ್ಟಿದೆ. ಅಮೆರಿಕ ಸೇನಾ ನೆಲೆಗಳನ್ನ ಗುರಿಯಾಗಿಸಿಕೊಂಡು ಇರಾನ್ ಖಂಡಾಂತರ ಕ್ಷಿಪಣಿಗಳನ್ನ ಹಾರಿಸಿದೆ. ಇದನ್ನ ʻಹಠಾತ್ ದಾಳಿಯ ಪ್ರಯತ್ನʼ ಎಂದು ಕರೆದಿರುವ ಯುಎಸ್ ಸೆಂಟ್ರಲ್ ಕಮಾಂಡ್, ಎಲ್ಲಾ ಕ್ಷಿಪಣಿಗಳನ್ನ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.
ಇರಾನ್ ಮೇಲೆ ಸತತ 13 ದಿನಗಳಿಂದ ನಡೆಸುತ್ತಿದ್ದ ಏರ್‌ಸ್ಟ್ರೈಕ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕವಾಗಿ ತಡೆಹಿಡಿದ ನಂತರ ಇರಾನ್, ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ಮೊದಲ ಹಾಗೂ ನೇರ ದಾಳಿ ಇದಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು , ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಬಳಿಕ, ಇರಾನ್ ಜೊತೆಗಿನ ಮುಂದಿನ ಮಾತುಕತೆಯ ಕುರಿತು ಚರ್ಚಿಸುತ್ತಿರುವಾಗಲೇ ಈ ದಾಳಿ ನಡೆದಿದೆ.
ಎಲ್ಲಾ ಕ್ಷಿಪಣಿಗಳೂ ಉಡೀಸ್
ಇನ್ನೂ ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿತೆ ನೀಡಿರುವ ಅಮೆರಿಕ ಸೆಂಟ್ರಲ್ ಕಮಾಂಡ್ , ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಉಡಾಯಿಸಿದ ಎಲ್ಲಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ತಡೆದಿದೆ. ಇಂದು ಬೆಳಗ್ಗಿನ ಜಾವ 3:15 (ಭಾರತೀಯ ಕಾಲಮಾನ) ಗಂಟೆಗೆ ಇರಾನ್ ಪಡೆಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದವು. ಆದ್ರೆ ಎಲ್ಲಾ ಕ್ಷಿಪಣಿಗಳನ್ನ ಹೊಡೆದುರುಳಿಸಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ಹೇಳಿಕೊಂಡಿದೆ.
ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ದಾಳಿ
ಈ ಮಧ್ಯೆ ಅಮೆರಿಕ ಮತ್ತು ಸೌದಿ ಅರೇಬಿಯಾದ ಯುದ್ಧವಿಮಾನಗಳು ಇರಾನ್ ಬೆಂಬಲಿತ ಉಗ್ರರ ವಿರುದ್ಧ ಇರಾಕ್‌ನ ಪೂರ್ವ ಭಾಗದಲ್ಲಿ ಭಾರೀ ವಾಯುದಾಳಿ ನಡೆಸಿವೆ.
ಕಳೆದ 72 ಗಂಟೆಗಳಲ್ಲಿ ಅಮೆರಿಕದ ಸೇನಾ ನೆಲೆಗಳು ಹಾಗೂ ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು 30ಕ್ಕೂ ಹೆಚ್ಚು ಡ್ರೋನ್ ದಾಳಿಗಳನ್ನು ನಡೆಸಿದ್ದ ಇರಾನ್ ಬೆಂಬಲಿತ ಉಗ್ರ ಸಂಘಟನೆಗಳ ಶಸ್ತ್ರಾಸ್ತ್ರ ಹಾಗೂ ಲಾಜಿಸ್ಟಿಕ್ಸ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ. ಅಷ್ಟೇ ಅಲ್ಲದೇ ಐಆರ್‌ಜಿಸಿ ನಿರ್ದೇಶನದ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಉಗ್ರರಿಗೆ ಇದುತಕ್ಕ ಉತ್ತರವಾಗಿದೆ ಎಂದು ದಾಳಿಯನ್ನು ಸಮರ್ಥಿಸಿಕೊಂಡಿದೆ.










