Friday, April 24, 2026
ಬೆಂಗಳೂರುರಾಜ್ಯಸುದ್ದಿ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಅಮಿತ್ ಶಾ ಸಹ ಭಾಗಿ, ಹಿಂದೂ ಧರ್ಮ ಆಚಾರ್ಯ ಮಹಾಸಭಾ ಆಯೋಜನೆ -ಕಹಳೆ ನ್ಯೂಸ್

ಬೆಂಗಳೂರು : ನಗರದ ಅರಿಶಿಣಕುಂಟೆಯ ನಗರೂರಿನ ಬಿಜಿಎಸ್‌ ಎಂಸಿಎಚ್‌ ಆಸ್ಪತ್ರೆ ಹಾಗೂ ಪಿಯು ಕಾಲೇಜು ಸಭಾಂಗಣದಲ್ಲಿ ಏ.4ರ ಶನಿವಾರ ನಡೆಯುವ ಸಭೆಯಲ್ಲಿ ದೇಶದ 100ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಗೂ ಧಾರ್ಮಿಕ ಕೇಂದ್ರಗಳ ಪ್ರಮುಖರ ಜತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಭೆ ನಡೆಸಲಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಹ ಭಾಗವಹಿಸಲಿದ್ದಾರೆ.

ಹಿಂದೂ ಧರ್ಮ ಆಚಾರ್ಯ ಮಹಾಸಭಾದಿಂದ 2 ದಿನ ಸಭೆ ಆಯೋಜಿಸಿದ್ದು ಏ.3ರ ಶುಕ್ರವಾರವೇ ಗುಜರಾತ್‌, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಸ್ವಾಮೀಜಿಗಳು ಆದಿಚುಂಚನಗಿರಿ ಮಠ ಹಾಗೂ ಬಿಜಿಎಸ್‌ ಕ್ಯಾಂಪಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ದೇಶದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆ ಹಿನ್ನೆಲೆಯಲ್ಲಿ ಶುಕ್ರವಾರ ಹಿಂದು ಧರ್ಮ ಆಚಾರ್ಯ ಮಹಾಸಭಾದ ಸದಸ್ಯರು ದಕ್ಷಿಣ ಭಾರತದ ಸಂತರ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಹಿಂದು ಧರ್ಮದ ಸಂಘಟನಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ಆಚಾರ್ಯ ಮಹಾಸಭಾ ಅತಿ ಪ್ರಮುಖ ಸ್ಥಾನ ಪಡೆದಿದ್ದು, ಇಡಿ ರಾಷ್ಟ್ರದ 14 ಪ್ರಭಾವಿ ಸಂತರು ಇದರ ಸದಸ್ಯರಾಗಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಇದರ ಹಾಲಿ ಸಂಯೋಜಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಈ ಸಂಸ್ಥೆಯ ಸಹಸದಸ್ಯರಾಗಿದ್ದಾರೆ. ಹೀಗಾಗಿ ಧಾರ್ಮಿಕ ನಿರ್ಧಾರಗಳ ದೃಷ್ಟಿಯಿಂದ ಈ ಸಭೆಗೆ ಮಹತ್ವ ಲಭಿಸಿದೆ.

ಸಭೆಯಲ್ಲಿ ಪಾಲ್ಗೊಳ್ಳಲು ಅಮಿತ್‌ ಶಾ ಆಗಮನ
ಹಿಂದು ಧರ್ಮ ಆಚಾರ್ಯ ಮಹಾಸಭಾದ ಅತಿ ಮಹತ್ವ ಹಾಗೂ ರಹಸ್ಯ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ನಗರೂರು ಮೈದಾನದಲ್ಲಿ ಆಯೋಜಿಸಿರುವ ಈ ಸಭೆಯಲ್ಲಿ ಶನಿವಾರ ಮಧ್ಯಾಹ್ನದವರೆಗೂ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್‌ ಆಗಲಿದ್ದಾರೆ.

ಅಸ್ಸಾಂ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಅಮಿತ್ ಶಾ ರಾತ್ರಿ 9 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆಂದು ರಾಜ್ಯ ಪೊಲೀಸ್‌ ಇಲಾಖೆಗೆ ಸಂದೇಶ ರವಾನೆ ಮಾಡಲಾಗಿತ್ತು. ಆದರೆ, ಅವರು ಒಂದು ಗಂಟೆ ಮುಂಚಿತವಾಗಿಯೇ ಬಂದಿಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಸ್ವಾಗತಿಸಿದರು. ಆ ಬಳಿಕ ಬಿಗಿ ಭದ್ರತೆಯ ನಡುವೆ ಅವರು ತಾಜ್‌ ವೆಸ್ಟೆಂಡ್‌ ಹೋಟೆಲ್‌ಗೆ ಆಗಮಿಸಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಶನಿವಾರ ಬೆಳಗ್ಗೆ 10.30ಕ್ಕೆ ಅವರು ಹೋಟೆಲ್‌ನಿಂದ ಸಭೆ ನಡೆಯುವ ಸ್ಥಳಕ್ಕೆ ಪ್ರಯಾಣ ಬೆಳೆಸಲಿದ್ದು ಮಧ್ಯಾಹ್ನ 2 ಗಂಟೆ ಸುಮಾರಿಗೆ ದೆಹಲಿಗೆ ತೆರಳಲಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಒಂದೊಮ್ಮೆ ಸಭೆ ತಡವಾಗಿ ಮುಕ್ತಾಯಗೊಂಡರೆ ಸಂಜೆ 5 ಗಂಟೆಗೆ ಅವರು ದೆಹಲಿಗೆ ವಾಪಸ್‌ ಆಗುವ ಸಾಧ್ಯತೆ ಇದೆ.