ಪುಟ್ಟ ಜೋಪಡಿಯಲ್ಲಿದ್ದ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿಸಿ ಟ್ರಸ್ಟ್ ನೇತೃತ್ವದಲ್ಲಿ ನಿರ್ಮಾಣಗೊಂಡ ‘ವಾತ್ಸಲ್ಯ‘ ಮನೆ ಹಸ್ತಾಂತರ -ಕಹಳೆ ನ್ಯೂಸ್

ಕಟ್‌ಬೇಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಲ್ಕುಂದ ಗ್ರಾಮದ ಕೊಲ್ಲೂರು ಮುಖ್ಯ ರಸ್ತೆಯ ಹತ್ತಿರದಲ್ಲೇ ಇರುವ ಪುಟ್ಟ ಜೋಪಡಿಯಲ್ಲಿದ್ದ ರಾಜು ಹಾಗೂ ಲಕ್ಷ್ಮೀ ದಂಪತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿಸಿ ಟ್ರಸ್ಟ್ ನೇತೃತ್ವದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ‘ವಾತ್ಸಲ್ಯ‘ ಮನೆ ನಿರ್ಮಾಣ ಮಾಡಿದ್ದು, ಅದರ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಳೆದ 24 ವರ್ಷಗಳಲ್ಲಿ ಕುಂದಾಪುರದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಾತ್ಸಲ್ಯದ ಮನೆ ಮಾದರಿ ಕಾರ್ಯಕ್ರಮ. ಸಮಾಜಮುಖಿ ಕಾರ್ಯಕ್ರಮಕ್ಕೆ ಧರ್ಮಸ್ಥಳವೇ ಮಾದರಿ. ಹೆಚ್ಚೆಚ್ಚು ಜನರು ಇಂತಹ ಕಾರ್ಯಕ್ರಮಗಳಲ್ಲಿ ಖುಷಿಯಿಂದ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸದಡಿ ಈ ಭಾಗದ ರಾಜು ದಂಪತಿಗೆ ವಾತ್ಸಲ್ಯ ಯೋಜನೆಯ ಮನೆ ಹಸ್ತಾಂತರ. ಶ್ರೀ ಕ್ಷೇತ್ರದಿಂದ ಎಲ್ಲ ಸ್ತರದ ಜನರಿಗೆ ಅಗತ್ಯ ಸಹಾಯ ನೀಡುತ್ತಿದೆ. ಈ ಭಾಗದಲ್ಲಿ ಅನೇಕ ವರ್ಷಗಳಿಂದ ನೂರಾರು ಕಾರ್ಯಕ್ರಮ ನಡೆಸಲಾಗಿದೆ. ಅಶಕ್ತರಿಗೆ, ಬಡವರಿಗೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೆರವಾಗುತ್ತಿದೆ ಎಂದು ಹೇಳಿದರು.
ಮನೆ ಫಲಾನುಭವಿ ರಾಜು ಅವರು, ನಮ್ಮಿಂದ ಇಷ್ಟು ವರ್ಷ ಮನೆ ಕಟ್ಟಲು ಸಾಧ್ಯವಾಗಿಲ್ಲ. ಅನೇಕ ವರ್ಷಗಳಿಂದ ಈ ಗುಡಿಸಲಲ್ಲಿಯೇ ವಾಸವಿದ್ದೇವೆ. ಈಗ ಧರ್ಮಸ್ಥಳದಿಂದ ಮನೆ ಮಾಡಿಕೊಟ್ಟಿದ್ದಾರೆ. ತುಂಬಾ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಕುಂದಾಪುರದ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ನೀರಾಮಯ ಸೊಸೈಟಿ ವಂಡ್ಸೆ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಶಶಿಧರ ಶೆಟ್ಟಿ ಮಾತನಾಡಿದರು.
ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ಸುಬ್ರಹ್ಮಣ್ಯ ಶೆಟ್ಟಿ, ಶೋಭಾ ಜಿ. ಪುತ್ರನ್, ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಹಟ್ಟಿಯಂಗಡಿ, ವಂಡ್ಸೆ ತಿರುಮಲ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಕಟ್ ಬೆಲ್ತೂರು ಗ್ರಾ.ಪಂ. ಆಡಳಿತಾಧಿಕಾರಿ ಸಂದೇಶ್ ನಾಯಕ್, ಪ್ರಮುಖರಾದ ಡಾ| ಅತುಲ್ ಕುಮಾರ್ ಶೆಟ್ಟಿ, ನಾಗಪ್ಪ ಕೊಠಾರಿ, ವಿ.ಕೆ. ಶಿವರಾಮ ಶೆಟ್ಟಿ, ವೆಂಕಟೇಶ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಯೋಜನಾಧಿಕಾರಿ ಉಮೇಶ್ ಶೆಟ್ಟಿ ಹೆಚ್., ವಲಯ ಮೇಲ್ವಿಚಾರಕ ಚಂದ್ರ ಮಧುವನ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ, ಪ್ರಗತಿ ಬಂಧು ಸ್ವ-ಸಹಾಯ ಸಂಘದ ಅಧ್ಯಕ್ಷರು, ಸದಸ್ಯರು, ಸೇವಾಪ್ರತಿನಿಧಿಗಳು, ಊರವರು ಉಪಸ್ಥಿತರಿದ್ದರು.









