Thursday, October 1, 2026
ಸುದ್ದಿ

ವಂಚನೆ ಆರೋಪ: ನಕಲಿ ಲೇಡಿ ಪಿಎಸ್‌ಐ ಪೊಲೀಸರ ಬಲೆಗೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ನಕಲಿ ಲೇಡಿ ಪಿಎಸ್‌ಐಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜಾಹೀರಾತು

ರಾಮನಗರ ಜಿಲ್ಲೆ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದ ಈಕೆ, ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಳ್ಳಲು ಅದೇ ಶೈಲಿಯ ಹೇರ್‌ಸ್ಟೈಲ್ ಹಾಗೂ ವೇಷಭೂಷಣ ಧರಿಸುತ್ತಿದ್ದಳು. ಕರ್ತವ್ಯಕ್ಕೆ ರಜೆ ಪಡೆದು ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದ ಈಕೆ, ಕೆಫೆಗೆ ಬರುತ್ತಿದ್ದ ಮಹಿಳೆಯರು ಹಾಗೂ ಯುವಕರನ್ನು ಪರಿಚಯಿಸಿಕೊಂಡು ಹಣ ಮತ್ತು ಚಿನ್ನದ ಒಡವೆಗಳನ್ನು ಪಡೆದು ಮೋಸ ಮಾಡುತ್ತಿದ್ದಳು. ಅಷ್ಟೇ ಅಲ್ಲದೆ, ಪರಿಚಯಸ್ಥರಿಂದ ಓಡಾಟಕ್ಕಾಗಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು ಬಳಿಕ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ನಿವೇದಿತಾ ವಿರುದ್ಧ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಮೋಸ ಹೋದ 20ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ್ದಾರೆ. ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ಇತರ ಹಲವು ಜಿಲ್ಲೆಗಳಲ್ಲೂ ಈಕೆ ಇದೇ ರೀತಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ನಿವೇದಿತಾ ವಂಚನೆಯಿಂದ ಗಳಿಸಿದ ಹಣ ಮತ್ತು ಚಿನ್ನವನ್ನು ತನ್ನ ಪ್ರಿಯಕರ ದೇವು ಎಂಬಾತನಿಗೆ ನೀಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಪೊಲೀಸರು ಪ್ರಿಯಕರ ದೇವು ಬಂಧನಕ್ಕಾಗಿ ಜಾಲ ಬೀಸಿದ್ದಾರೆ.

ಅಲ್ಲದೆ ಈಕೆಯ ಮೊಬೈಲ್ ಪರಿಶೀಲಿಸಿದಾಗ ಬೇರೆ ಬೇರೆ ಹೆಸರುಗಳಲ್ಲಿದ್ದ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಪ್ರಸ್ತುತ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ವಂಚನೆಯ ಸಂಪೂರ್ಣ ಪ್ರಮಾಣ ಮುಂದಿನ ತನಿಖೆಯಿಂದ ಹೊರಬರಬೇಕಿದೆ.