Sunday, November 15, 2026
ಸುದ್ದಿ

ಮಂಗಳೂರು-ಕಟ್ರಾ ನವಯುಗ ಎಕ್ಸ್‌ಪ್ರೆಸ್ ಪುನರಾರಂಭಕ್ಕೆ ಆಗ್ರಹ; ಕಿಶೋರ್ ಕುಮಾರ್ ಮನವಿಗೆ ರೈಲ್ವೆ ಸಚಿವರ ಸಕಾರಾತ್ಮಕ ಸ್ಪಂದನೆ! – ಕಹಳೆ ನ್ಯೂಸ್

ಮಂಗಳೂರಿನಿಂದ ಕರ್ನಾಟಕದ ಒಳನಾಡು ಮಾರ್ಗವಾಗಿ ಕಾಶ್ಮೀರದ ಕಟ್ರಾ ವೈಷ್ಣೋದೇವಿಗೆ ‘ನವಯುಗ ಎಕ್ಸ್‌ಪ್ರೆಸ್’ ರೈಲು ಪುನರಾರಂಭಿಸಿ; ಬೆಂಗಳೂರು-ಮಂಗಳೂರು ಹೆಚ್ಚುವರಿ ರಾತ್ರಿ ರೈಲು, ಕಬಕ ಪುತ್ತೂರು ನಿಲ್ದಾಣದ ಮೇಲ್ಛಾವಣಿ ಸಹಿತ ವಿವಿಧ ಬೇಡಿಕೆಗಳ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದ ಸಚಿವರು.

ಜಾಹೀರಾತು

ಮಂಗಳೂರು: ವಂದೇ ಭಾರತ್ ರೈಲು ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ನಿಮಿತ್ತ ನಿನ್ನೆ ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಭೇಟಿಯಾಗಿ ಕರಾವಳಿ ಕರ್ನಾಟಕದ ಬಹುದಿನಗಳ ರೈಲ್ವೆ ಬೇಡಿಕೆಗಳ ಕುರಿತು ಸವಿವರವಾದ ಮನವಿ ಪತ್ರವನ್ನು ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಭಯ ಜಿಲ್ಲೆಗಳ ಸಂಸದರು, ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕರು, ಮಂಗಳೂರು ರೈಲ್ವೆ ವಲಯವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವಿಲೀನಗೊಳಿಸಿರುವುದಕ್ಕೆ ಹಾಗೂ ಕರಾವಳಿಯಲ್ಲಿ ಹೈಸ್ಪೀಡ್ ರೈಲು ಸಂಪರ್ಕ ಬಲಪಡಿಸಿರುವುದಕ್ಕೆ ಸಮಸ್ತ ಕರಾವಳಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕರ್ನಾಟಕದ ಮಾರ್ಗವಾಗಿ ‘ನವಯುಗ ಎಕ್ಸ್‌ಪ್ರೆಸ್’ ಪುನರಾರಂಭಕ್ಕೆ ಪ್ರಮುಖ ಒತ್ತು:

ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಐತಿಹಾಸಿಕ ಮಂಗಳೂರು ಸೆಂಟ್ರಲ್ – ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ನವಯುಗ ಎಕ್ಸ್‌ಪ್ರೆಸ್ (16687/16688) ರೈಲನ್ನು ಪುನರಾರಂಭಿಸುವಂತೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಪ್ರಮುಖವಾಗಿ ಒತ್ತಾಯಿಸಿದರು. ಈ ಹಿಂದೆ ಮಂಗಳೂರಿನಿಂದ ಮುಖ್ಯ ಇಂಜಿನ್ ಹಾಗೂ ಬೋಗಿಯೊಂದಿಗೆ ಹೊರಟು ತಿರುನಲ್ವೇಲಿಯಲ್ಲಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಿಕೊಂಡು ಕೇರಳ, ಪಾಲಕ್ಕಾಡ್, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮಾರ್ಗವಾಗಿ ನವದೆಹಲಿ, ಪಠಾಣ್‌ಕೋಟ್, ಜಮ್ಮು ಮೂಲಕ ಕಟ್ರಾ ವೈಷ್ಣೋದೇವಿಗೆ ಈ ರೈಲು ಸಂಚರಿಸುತ್ತಿತ್ತು. ಆದರೆ ಕೋವಿಡ್ ಬಳಿಕ ಈ ರೈಲನ್ನು ಕೇವಲ ತಿರುನಲ್ವೇಲಿಯಿಂದ ಮಾತ್ರ ಆರಂಭಿಸಿ, ಮಂಗಳೂರನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.

ಇದೀಗ ಈ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್‌ನಿಂದಲೇ ಆರಂಭಿಸಿ, ಕರ್ನಾಟಕದ ಒಳನಾಡು ಮಾರ್ಗವಾಗಿ ಅಂದರೆ ಮಂಗಳೂರು – ಕಬಕ ಪುತ್ತೂರು – ಸುಬ್ರಹ್ಮಣ್ಯ ರೋಡ್ – ಹಾಸನ – ಅರಸೀಕೆರೆ – ದಾವಣಗೆರೆ – ಹುಬ್ಬಳ್ಳಿ – ಬೆಳಗಾವಿ – ಮೀರಜ್ – ಪುಣೆ ಮಾರ್ಗವಾಗಿ ನವದೆಹಲಿ ಮತ್ತು ಕಟ್ರಾವರೆಗೆ ಸಂಚರಿಸುವಂತೆ ಮಾಡಬೇಕು ಎಂದು ಶಾಸಕರು ಮನವಿಯಲ್ಲಿ ಕೋರಿದ್ದಾರೆ. ಇದರಿಂದ ಕಾಶ್ಮೀರದ ವೈಷ್ಣೋದೇವಿ ಯಾತ್ರೆಗೆ ತೆರಳುವ ಕರಾವಳಿ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತಾದಿಗಳಿಗೆ ಮತ್ತು ದೇಶ ಸೇವೆಗೆ ಕರ್ತವ್ಯದ ಮೇಲೆ ತೆರಳುವ ಸೈನಿಕರಿಗೆ ಅಪಾರ ಅನುಕೂಲವಾಗಲಿದೆ ಎಂದು ವಿವರಿಸಿದರು.

ಮನವಿಯಲ್ಲಿರುವ ಇತರ ಪ್ರಮುಖ ಬೇಡಿಕೆಗಳು:

1. ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ: ಮಂಗಳೂರು-ಸುಬ್ರಹ್ಮಣ್ಯ-ಹಾಸನ ಮಾರ್ಗದ ಅತ್ಯಂತ ಜನನಿಬಿಡ ನಿಲ್ದಾಣವಾಗಿರುವ ಕಬಕ ಪುತ್ತೂರು ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ಪ್ಲಾಟ್‌ಫಾರ್ಮ್ ಮೇಲ್ಛಾವಣಿ ಇಲ್ಲದೆ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಕುಕ್ಕೆ ಸುಬ್ರಹ್ಮಣ್ಯ ಭಕ್ತಾದಿಗಳು ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ಮಳೆಗಾಲಕ್ಕೂ ಮುನ್ನ ಪೂರ್ಣ ಪ್ರಮಾಣದ ಮೇಲ್ಛಾವಣಿ, ಆಸನ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು.

2. ಬೆಂಗಳೂರು-ಮಂಗಳೂರು ಹೆಚ್ಚುವರಿ ರಾತ್ರಿ ರೈಲು: ವರ್ಷಪೂರ್ತಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುವುದರಿಂದ ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ (ಹಾಸನ/ಮೈಸೂರು ಮಾರ್ಗವಾಗಿ) ಎಲ್‌ಎಚ್‌ಬಿ ಬೋಗಿಗಳನ್ನೊಳಗೊಂಡ ಹೆಚ್ಚುವರಿ ದೈನಂದಿನ ರಾತ್ರಿ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಹಾಗೂ ವಾರದಲ್ಲಿ ಮೂರು ದಿನ ಸಂಚರಿಸುವ ರೈಲುಗಳನ್ನು ಪ್ರತಿದಿನಕ್ಕೆ ವಿಸ್ತರಿಸಬೇಕು.

3. 13 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ: ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಭರದಲ್ಲಿ ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (16516) ಮತ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ (16576) ಸೇರಿದಂತೆ ಕರಾವಳಿ ಹಾಗೂ ಬೆಂಗಳೂರು ಮಾರ್ಗದ 13 ಪ್ರಮುಖ ರೈಲುಗಳು 15 ರಿಂದ 60 ನಿಮಿಷಗಳಿಗೂ ಹೆಚ್ಚು ಕಾಲ ವಿಳಂಬವಾಗುತ್ತಿವೆ. ದೈನಂದಿನ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ರೈಲುಗಳ ವೇಳಾಪಟ್ಟಿಯನ್ನು ತಕ್ಷಣವೇ ಮರುಪರಿಶೀಲಿಸಿ ಸಮಯಪಾಲನೆಗೆ ಕ್ರಮ ಕೈಗೊಳ್ಳಬೇಕು.

4. ಸ್ಥಳೀಯ ಜೋಡಿ ಹಳಿ ಕಾಮಗಾರಿ ತ್ವರಿತಗೊಳಿಸುವುದು: ಮಂಗಳೂರಿನ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿನ ದಟ್ಟಣೆ ತಪ್ಪಿಸಲು ನೇತ್ರಾವತಿ-ಮಂಗಳೂರು ಸೆಂಟ್ರಲ್ (2 ಕಿ.ಮೀ) ಮತ್ತು ಕಂಕನಾಡಿ-ಪಣಂಬೂರು (19 ಕಿ.ಮೀ) ಜೋಡಿ ಹಳಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಹಾಸನ-ಮಂಗಳೂರು ಘಾಟ್ ವಿಭಾಗದ ಜೋಡಿ ಹಳಿ ಯೋಜನೆಯ ಡಿಪಿಆರ್ (DPR) ಪ್ರಕ್ರಿಯೆಗೆ ವೇಗ ನೀಡಬೇಕು.

5. ಕರಾವಳಿ-ಗೋವಾ-ಉತ್ತರ ಕರ್ನಾಟಕ ಸಂಪರ್ಕಿಸುವ ಹೊಸ ರೈಲು: ಕರಾವಳಿ ಕರ್ನಾಟಕವನ್ನು ಗೋವಾ ಮೂಲಕ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ ಹುಬ್ಬಳ್ಳಿ-ಧಾರವಾಡ ಮತ್ತು ರಾಜಧಾನಿ ಬೆಂಗಳೂರಿಗೆ ನೇರವಾಗಿ ಬೆಸೆಯಲು ಮಂಗಳೂರು – ಉಡುಪಿ – ಕಾರವಾರ – ಮಡಗಾಂವ್ – ಲೋಂಡಾ – ಹುಬ್ಬಳ್ಳಿ – ದಾವಣಗೆರೆ – ಬೆಂಗಳೂರು ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು.

 

ರೈಲ್ವೆ ಸಚಿವರ ಮೆಚ್ಚುಗೆ ಮತ್ತು ಭರವಸೆ:

ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಮಂಡಿಸಿದ ಅಂಕಿಅಂಶ ಸಹಿತ ಬೇಡಿಕೆಗಳನ್ನು ಮತ್ತು ವಿಶೇಷವಾಗಿ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಕರ್ನಾಟಕದ ಮಾರ್ಗವಾಗಿ ಮರುಆರಂಭಿಸುವ ದೂರದೃಷ್ಟಿಯ ಪ್ರಸ್ತಾವನೆಯನ್ನು ಆಲಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಶಾಸಕರ ಕಾರ್ಯದಕ್ಷತೆ ಹಾಗೂ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ರೈಲ್ವೆ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದಾರೆ.