ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ – ಮೈಸೂರಿನಲ್ಲೇ ನಿಂತ ಸೇನಾ ಹೆಲಿಕಾಪ್ಟರ್! – ಕಹಳೆ ನ್ಯೂಸ್

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಭೇಟಿಯ ವೇಳೆ ಬೆಂಗಾವಲು ಪಡೆಯ ಸೇನಾ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬೆಂಗಳೂರಿನ ಕಾರ್ಯಕ್ರಮಗಳನ್ನು ಮುಗಿಸಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ, ಕಾರ್ಯಕ್ರಮದ ಬಳಿಕ ವಾಪಸ್ ತೆರಳುವ ಸಿದ್ಧತೆಯಲ್ಲಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರತೀಯ ವಾಯುಸೇನೆಯ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಧಾನಿ ಮೋದಿ ಮಧ್ಯಾಹ್ನ ಸುಮಾರು 3:20ಕ್ಕೆ ಮೈಸೂರಿಗೆ ಆಗಮಿಸಿದ್ದರು. ಮೂರು ಸೇನಾ ಹೆಲಿಕಾಪ್ಟರ್‌ಗಳಲ್ಲಿ ಬಂದಿಳಿದಿದ್ದ ಅವರ ಪಡೆಯಲ್ಲಿನ ಎರಡು ಹೆಲಿಕಾಪ್ಟರ್‌ಗಳು ಬೆಂಗಾವಲು ವಾಹನಗಳಾಗಿದ್ದವು.
ಕಾರ್ಯಕ್ರಮ ಮುಗಿದ ಬಳಿಕ ಎರಡು ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿದರೂ, ಒಂದು ಬೆಂಗಾವಲು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಟೇಕ್ ಆಫ್ ಆಗಲು ಸಾಧ್ಯವಾಗಲಿಲ್ಲ. ತಕ್ಷಣ ಕಾರ್ಯಪ್ರವೃತ್ತರಾದ ವಾಯುಸೇನೆ ಸಿಬ್ಬಂದಿ, ಉಳಿದ ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿ ದೋಷಪೂರಿತ ಹೆಲಿಕಾಪ್ಟರ್ ಅನ್ನು ಹೆಲಿಪ್ಯಾಡ್‌ನಲ್ಲೇ ನಿಲ್ಲಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಲಿಕಾಪ್ಟರ್‌ನ ದುರಸ್ತಿ ಕಾರ್ಯ ಮುಂದುವರಿದಿದೆ.











