Recent Posts

Thursday, September 17, 2026
ಪುತ್ತೂರು

ವಿಟ್ಲ ಪೊಲೀಸ್ ಠಾಣಾ ಎಸ್.ಐ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ಪ್ರಕರಣ: ನ್ಯಾಯಾಂಗ ಬಂಧನದಲ್ಲಿದ್ದ ಓರ್ವ ಆರೋಪಿಗೆ ಷರತ್ತುಬದ್ಧ ಜಾಮೀನು-ಕಹಳೆ ನ್ಯೂಸ್

ಪುತ್ತೂರು: ಕಳೆದ ಮಾರ್ಚ್ ತಿಂಗಳಲ್ಲಿ ವಿಟ್ಲ ಪೊಲೀಸ್ ಠಾಣಾ ಎಸ್.ಐ ಮೇಲೆ, ಗುಂಡು ಹಾರಿಸಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪೈಕಿ, ಕೇರಳ ರಾಜ್ಯದ ಉಪ್ಪಳದ ಹೈದರ್ ಎಂಬವನಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

ಜಾಹೀರಾತು

ಕಳೆದ ಮಾರ್ಚ್ 25ರಂದು ಬೆಳಗಿನ ಜಾವ 4:00 ಗಂಟೆಗೆ ಬಂಟ್ವಾಳ ತಾಲೂಕು ಬಾಕ್ರಬೈಲು ಕಡೆಯಿಂದ, ಸಾಲೆತ್ತೂರು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ನಿಲ್ಲಿಸುವಂತೆ ವಿಟ್ಲದ ಅಂದಿನ ಎಸ್.ಐ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಸೂಚಿಸಿದ್ದಾರೆ. ಈ ವೇಳೆ ಕಾರಿನ ಚಾಲನಾ ಸೀಟಿನ ಎಡಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು, ಪಿಸ್ತೂಲಿನಿಂದ ಎಸ್.ಐ ಕಡೆಗೆ, ಗುರಿಯಿಟ್ಟದ್ದನ್ನು ಕಂಡ ಎಸ್.ಐಯವರು, ಬದಿಗೆ ಸರಿದು ಗುಂಡಿನಿಂದ ತಪ್ಪಿಸಿಕೊಂಡಿದ್ದರು. ನಂತರ ಆರೋಪಿಗಳು ಸಂಚರಿಸುತಿದ್ದ ಕಾರು ವೇಗವಾಗಿ ಚಲಿಸಿ, ರಸ್ತೆಯಲ್ಲಿಅಳವಡಿಸಿದ್ದ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು, ರಸ್ತೆಬದಿಯ ಕೆಸರಲ್ಲಿ ಹೂತು ಹೋಗಿ ಬಾಕಿಯಾಗಿತ್ತು. ಕಾರಿನಲ್ಲಿದ್ದವರು ತಪ್ಪಿಸಿಕೊಂಡು, ಓಡಿ ಹೋಗಲು ಪ್ರಯತ್ನಿಸಿದಾಗ, ಆರೋಪಿಗಳ ಪೈಕಿ, ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಕಾರನ್ನು ಪರಿಶೀಲಿಸಿದಾಗ, ಆರೋಪಿಯಿಂದ ವಿದೇಶಿ ನಿರ್ಮಿತ ಪಿಸ್ತೂಲುಗಳು, ಪಿಸ್ತೂಲ್‍ಗೆ ಬಳಸುವ ಕಚ್ಚಾ ಗುಂಡುಗಳು, ಬಂದೂಕುಗಳು, ಮಾರಕಾಯುಧಗಳು ಹಾಗೂ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಪರಾರಿಯಾದ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ ಪೊಲೀಸರು, ದಿನಾಂಕ 05-04-2021ರಂದು ಬೆಳಗಿನ ಜಾವ ಮಾಣಿ ಸಮೀಪ, ಉಳಿದ ಆರೋಪಿಗಳನ್ನು ಪತ್ತೆಹಚ್ಚಿ, ಅವರಿಂದ ವಿದೇಶಿ ಪಿಸ್ತೂಲುಗಳು, ಬಂದೂಕುಗಳು, ಕಚ್ಚಾ ಗುಂಡುಗಳನ್ನು ವಶಪಡಿಸಿಕೊಂಡು, ಬಂಧಿಸಿ, ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ಇನ್ನು ಆರೋಪಿಗಳು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ, ಪೊಲೀಸರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕೇರಳದಿಂದ ಕರ್ನಾಟಕಕ್ಕೆ ಬರುವ ಸಮಯ, ವಿಟ್ಲ ಪೊಲೀಸರಿಗೆ ಸಿಕ್ಕಿದ ಮಾಹಿತಿ ಮೇರೆಗೆ, ಆರೋಪಿಗಳ ಬಂಧನಕ್ಕೆ, ವಿಟ್ಲ ಪೊಲೀಸರು ಬಲೆ ಬೀಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.

ಆರೋಪಿಗಳ ಮೇಲೆ ಮಂಜೇಶ್ವರ ಮತ್ತು ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ, ಏಳು ಜನ ಆರೋಪಿಗಳ ಪೈಕಿ, ಉಪ್ಪಳದ ಹೈದರ್ ಎಂಬಾತನಿಗೆ, ದ.ಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು