
ಬೆಂಗಳೂರು, ಮಾರ್ಚ್ 5: ಕರ್ನಾಟಕ ಸರ್ಕಾರಕ್ಕೆ ಆದಾಯಕ್ಕೆ ತಂದು ಕೊಡುವ ಅಬಕಾರಿ ಇಲಾಖೆ ಪ್ರಸ್ತಾವನೆಗೆ ಮಣಿದು ನಿರೀಕ್ಷೆಯಂತೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಮಿಕ್ಕಂತೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆಯಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಕಾರಣ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಅನುದಾನ ಈ ಬಾರಿ ಸಾವಿರಾರು ಕೋಟಿ ರುಗಳಷ್ಟು ಕಡಿಮೆಯಾಗಿದೆ. ಜಿಎಸ್ಟಿ ನಷ್ಟ ಭರಿಸಲು ಹಾಗೂ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡಿದ ಕೇಂದ್ರ ಸರ್ಕಾರದ ಬಜೆಟ್, 7ನೇ ಬಾರಿಗೆ ಆಯವ್ಯಯ ಮಂಡಿಸಿದ ಯಡಿಯೂರಪ್ಪ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಸುಮಾರು 1 ಗಂಟೆ 46 ನಿಮಿಷಗಳ ಭಾಷಣದ ನಂತರ ಯಾವೆಲ್ಲ ವಸ್ತುಗಳು ಏರಿಕೆಯಾಗಿವೆ? ಯಾವೆಲ್ಲ ಕಡಿಮೆಯಾಗಿದೆ ಅಥವಾ ಹೆಚ್ಚಿನ ತೆರಿಗೆ ಬಿದ್ದಿದೆ ಎಂಬುದರ ವಿವರ ಇಲ್ಲಿದೆ.
ಯಾವುದು ಏರಿಕೆ?
* ಮದ್ಯದ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಹೆಚ್ಚಳ.
* ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ
* ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಏರಿಕೆ
* ಡೀಸೆಲ್ ಮೇಲಿನ 32 ರಿಂದ 35 ರಷ್ಟು ಸೆಸ್ ಏರಿಕೆ, ಡೀಸೆಲ್ ಪ್ರತಿ ಲೀಟರ್ ಬೆಲೆ 1.60 ರು ಏರಿಕೆ
* ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ 32ರಿಂದ 35ಕ್ಕೇರಿಕೆ
* ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್ಗೆ ಶೇ.50ರಷ್ಟು ಹೆಚ್ಚಳ
* ವಿದ್ಯುತ್ ದರ ಹೆಚ್ಚಳ ಪ್ರತಿ ಯೂನಿಟ್ ಮೇಲೆ 10ರಿಂದ 20 ಪೈಸೆ ಏರಿಕೆ ಮುಂದುವರಿಕೆ.
* ವಿದ್ಯುತ್ ಮೇಲಿನ ತೆರಿಗೆ ಶೇ.6ರಿಂದ ಶೇ.9ಕ್ಕೆ ಏರಿಕೆ ಮುಂದುವರಿಕೆ
ಯಾವುದು ಇಳಿಕೆ?
* ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯ್ತಿ, ರೈತರಿಗೆ ಹೆಕ್ಟೇರಿಗೆ 10 ಸಾವಿರ ರು ಅನುದಾನ.
* ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ. ಸಿರಿ ಧಾನ್ಯಗಳ ಪಟ್ಟಿಗೆ ಹೆಚ್ಚಿನ ಧಾನ್ಯಗಳ ಸೇರ್ಪಡೆ.









