ಕೊಚ್ಚಿ: ಕೇರಳದ ಕೊಚ್ಚಿಯಲ್ಲಿನ ಮರಾಡು ಪ್ರದಶೇದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಗಗನಚುಂಬಿ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಮುಂದುವರೆದಿದ್ದು, ಇಂದೂ ಕೂಡ ಮತ್ತೆ ಎರಡು ಫ್ಲಾಟ್ ಗಳನ್ನು ಧ್ವಂಸಗೊಳಿಸಲಾಗಿದೆ.

ಕರಾವಳಿ ನಿಯಂತ್ರಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಕೊಚ್ಚಿಯ ಮರಾಡು ಪ್ರದೇಶ ಬಳಿಯಿದ್ದ 4 ಲಕ್ಸುರಿ ವಸತಿ ಕಟ್ಟಡವನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ನಾಲ್ಕು ತಿಂಗಳ ಹಿಂದೆಯೇ ಆದೇಶ ನೀಡಿತ್ತು. ಅದರಂತೆ ಶನಿವಾರ ಎರಡು ಕಟ್ಟಡಗಳನ್ನು ಧ್ವಂಸಗೊಳಿಸಿ, ತೆರುವುಗೊಳಿಸಿದ್ದ ಕೇರಳ ಸರ್ಕಾರ, ಇಂದು ಮತ್ತೆರಡು ಕಟ್ಟಡಗಳನ್ನು ಹೊಡೆದುರುಳಿಸಿದೆ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಟ್ಟಡ ಉರುಳಿಸುವ ಕೆಲಸವನ್ನು ಕೈಗೆತ್ತಿಕೊಂಡ ಕೇರಳ ಸರ್ಕಾರ, ನಿಯಂತ್ರಿತ ಸ್ಫೋಟಕಗಳನ್ನು ಬಳಸಿಕೊಂಡು ಬಹು ಎತ್ತರದ ಎಚ್2ಒ ಹೋಲಿ ಫೈತ್ ಅಪಾರ್ಟ್ಮೆಂಟ್ ಅನ್ನು ನೆಲಸಮ ಮಾಡಿತು.
ಬಳಿಕ ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗಿತ್ತು. ಇಂದು ಬೆಳಗ್ಗೆ ಅದೇ ಸಮಯದಲ್ಲಿ ಮತ್ತೆರಡು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಸ್ಫೋಟಕಗಳನ್ನಿಟ್ಟು ಜೈನ್ ಕೊರಲ್ ಕೋವ್ ಕಾಂಪ್ಲೆಕ್ಸ್ ಅನ್ನು ಇಂದು ಧ್ವಂಸ ಮಾಡಲಾಗಿದ್ದು, ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ವಿಶೇಷವೆಂದರೆ ವಸತಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಕಟ್ಟಡ ನೆಲಸಮ ಕಾರ್ಯಾಚರಣೆ ಇದಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಟ್ಟಡ ತೆರವಿಗೆ ಸುಪ್ರೀಂಕೊರ್ಟ್ ಆದೇಶ ನೀಡಿತ್ತು. ಕರಾವಳಿ ನಿಯಂತ್ರಣಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಮಾರಾಡುವಿನಲ್ಲಿರುವ ಕಟ್ಟಡಗಳನ್ನು ನೆಲಕ್ಕುರುಳಿಸಲು ಕೇರಳ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕಾಗಿ ನ್ಯಾಯಾಲಯ 138 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಇದಲ್ಲದೆ, ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು.









