ಫ್ಲೈಟ್‌ನಲ್ಲಿ ಬಂದು BSNL ಸಮವಸ್ತ್ರ ಧರಿಸಿ ತಾಮ್ರದ ತಂತಿ ಕದಿಯುತ್ತಿದ್ದ ಹೈಟೆಕ್ ಖದೀಮರು ಅರೆಸ್ಟ್ -ಕಹಳೆ ನ್ಯೂಸ್

ಬಂಧಿತರನ್ನು ಉತ್ತರ ಪ್ರದೇಶದ ನಿವಾಸಿಗಳಾದ ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂದು ಗುರುತಿಸಲಾಗಿದೆ. ಇವರು ಕೇವಲ ಬೆಂಗಳೂರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಇದೇ ಮಾದರಿಯ ಕಳ್ಳತನ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಕಬ್ಬಿಣದ ಕಂಬಗಳನ್ನು ಒಡೆದು, ಅದರೊಳಗಿನ ಬೆಲೆಬಾಳುವ ತಾಮ್ರದ ತಂತಿ(Copper Wire) ಮತ್ತು ಮಾಡ್ಯೂಲ್‌ಗಳನ್ನು ಎಗರಿಸುತ್ತಿದ್ದರು.
ರೈಲಿನಲ್ಲಿ ಸಾಗಾಟ:
ಈ ಗ್ಯಾಂಗ್ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.ಕಳ್ಳತನ ಮಾಡುವ ಉದ್ದೇಶದಿಂದಲೇ ಈ ತಂಡ ವಿಮಾನದ ಮೂಲಕ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹಾರುತ್ತಿತ್ತು. ಬೆಂಗಳೂರಿಗೆ ಬಂದಿಳಿದ ಇವರು ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಮತ್ತು ಯಶವಂತಪುರದಲ್ಲಿ ಜುಲೈ 17 ಮತ್ತು 19ರಂದು ಸರಣಿ ಕಳ್ಳತನ ನಡೆಸಿದ್ದರು. ಕಳ್ಳತನ ಮಾಡಿದ ನಂತರ ಕದ್ದ ಮಾಲನ್ನು ಪತ್ತೆಯಾಗದಂತೆ ರೈಲಿನ ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸಿ ಪರಾರಿಯಾಗುತ್ತಿದ್ದರು.
ಪೊಲೀಸ್ ಕಾರ್ಯಾಚರಣೆ
ಸತತ ಕಳ್ಳತನದಿಂದ ಕಂಗೆಟ್ಟಿದ್ದ ಬಿಎಸ್‌ಎನ್‌ಎಲ್ ಸಿಬ್ಬಂದಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ಆಸ್ತಿಗೆ ಹಾನಿ ಮಾಡಿ, ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದ ಈ ‘ಫ್ಲೈಯಿಂಗ್ ಕಳ್ಳರ’ ಬಂಧನದಿಂದ ಬಿಎಸ್‌ಎನ್‌ಎಲ್ ಇಲಾಖೆ ನಿಟ್ಟುಸಿರು ಬಿಟ್ಟಿದೆ. ಸದ್ಯ ಆರೋಪಿಗಳನ್ನು ಜೈಲಿಗಟ್ಟಿರುವ ಪೊಲೀಸರು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.









