
ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆ ಕೊಂಚ ಬಿಡುವು ಕೊಟ್ಟಿತ್ತು. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲೂ ಮಳೆಯ ಪ್ರಮಾಣ ಸ್ವಲ್ಪ ತಗ್ಗಿತ್ತು. ಈಗ ಮಳೆರಾಯ ಮತ್ತೆ ಅಬ್ಬರಿಸಲು ಶುರುವಾಗಿದ್ದಾನೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇನ್ನು, ಉತ್ತರ ಕರ್ನಾಟಕ ಭಾಗದಲ್ಲೂ ವರುಣನ ಅಬ್ಬರ ಜೋರಾಗಿದೆ ಎಂದು ಹಮಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಾವಿ, ಧಾರವಾಡ, ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗುತ್ತದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಘಟ್ಟಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಲ್ಲೂ ಮಳೆ
ರಾಜಧಾನಿ ಬೆಂಗಳೂರಿನಲ್ಲೂ ಮಳೆರಾಯ ಆರ್ಭಟಿಸಿದ್ದಾನೆ. ನಗರದ ಅನೇಕ ಕಡೆಗಳಲ್ಲಿ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತದೆ. ಹೀಗಿರುವಾಗಲೇ ಒಂದೆಡೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಕೊಯ್ನಾ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದೆ. ಇದರಿಂದ ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಾಗಿ ಮತ್ತೆ ಪ್ರವಾಹ ಉಂಟಾಗುವ ಪರಿಸ್ಥಿತಿ ಇದೆ. ಇನ್ನೊಂದೆಡೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲೇ ಮಳೆಯ ಆರ್ಭಟ ಜೋರಾಗಲಿದ್ದು, ಜನರು ಆತಂಕದಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಉನ್ನತ ಮಟ್ಟದ ಜಂಟಿ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.
ಇನ್ನು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿಯೂ ಕೆಲವು ದಿನಗಳ ಹಿಂದೆ ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿತ್ತು. ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದವು. ಮನೆ-ಮಠ ಎಲ್ಲವೂ ಕೊಚ್ಚಿ ಹೋಗಿ ಜನರು ನಿರಾಶ್ರಿತರಾಗಿದ್ದರು. ಈಗ ಮಳೆರಾಯ ಮತ್ತೆ ತನ್ನ ಆರ್ಭಟವನ್ನು ಆರಂಭಿಸಲಿದ್ದಾನೆ.
ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಸಾಧ್ಯತೆ ಇದ್ದು, ಅಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನು, ಕರಾವಳಿ ಭಾಗದಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ತಗ್ಗುಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೆ.









