
ಬೆಂಗಳೂರು: ವಿಶ್ವಾಸಮತಯಾಚನೆ ಸಮಯದಲ್ಲಿ ಕಾದು ನೋಡಿ. ನಮ್ಮ ಮೈತ್ರಿ ಸರ್ಕಾರವೇ ಜಯಗಳಿಸುತ್ತದೆ. ಸಂವಿಧಾನದ ಒಳಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ನಿರ್ಣಾಯಕ ಬಂದರೆ, ನಮ್ಮ ಸರ್ಕಾರ ಜಯಗಳಿಸುತ್ತೆ. ಸಿಎಂ ಮತ್ತು ಸಿದ್ದರಾಮಯ್ಯ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಈ ನಡುವೆ ಬಿಜೆಪಿಗೆ ಸುಪ್ರೀಂಗೆ ಹೋಗುವ ಅವಶ್ಯಕತೆ ಏನಿತ್ತು. ಸಭಾಧ್ಯಕ್ಷರ ಕೆಲಸದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ, ಆದರೂ ಅರ್ಜಿ ಸಲ್ಲಿಸಿ ಸುಪ್ರೀಂಗೆ ಅಗೌರವ ತೋರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅತೃಪ್ತರನ್ನು ನಂಬಬೇಡಿ, ಬೆಳಗ್ಗೆ ನಮ್ಮ ಜೊತೆಗಿದ್ದವರು ಮಧ್ಯಾಹ್ನ ವಿಮಾನ ಹತ್ತಿಕೊಂಡು ಹೋಗುತ್ತಾರೆ. ಮತ ಹಾಕಿದ ಜನರಿಗೆ ಅವರು ಮೋಸ ಮಾಡುತ್ತಿದ್ದಾರೆ ಎಂದು ರೆಬಲ್ ಶಾಸಕರ ವಿರುದ್ಧ ಕಿಡಿಕಾರಿದರು.









