ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕ ಅಜಿತ್ ಪವಾರ್ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ -ಕಹಳೆ ನ್ಯೂಸ್

ಬೆಂಗಳೂರು: ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಜಿತ್ ಪವಾರ್, ಸಾಮಾಜಿಕ ಬದ್ಧತೆ ಹೊಂದಿದ್ದ ನಾಯಕರಾಗಿದ್ದರು. ಜನರ ಮಧ್ಯೆ ಇರುವ ನಾಯಕನಾಗಿ ಜನಾನುರಾಗಿ ಹೆಸರಾಗಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದರು.
ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಸಚಿವರು, ಮಹಾರಾಷ್ಟ್ರಕ್ಕೆ ಗಡಿ ಭಾಗದಲ್ಲಿರುವ ಕಾರಣ ಬೆಳಗಾವಿಯಲ್ಲಿ ಅಜಿತ್ ಪವಾರ್ ಅವರ ಅನುಯಾಯಿಗಳು ಸಾಕಷ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ, ನೀರಾವರಿ, ಕೈಗಾರಿಕಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಅಜಿತ್ ಪವಾರ್, ಮಹಾರಾಷ್ಟ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು ಎಂದು ಸಚಿವರು ಸ್ಮರಿಸಿದರು.
ಅಜಿತ್ ಪವಾರ್ ಧೈರ್ಯವಂತ ವ್ಯಕ್ತಿತ್ವ ಹೊಂದಿದ್ದರು. ಪ್ರತಿದಿನ ಬೆಳಗ್ಗೆ 6.30ರಿಂದಲೇ ಜನರನ್ನು ಭೇಟಿಯಾಗುತ್ತಿದ್ದ ಅವರು ಓರ್ವ ಮುತ್ಸದಿ ರಾಜಕಾರಣಿಯಾಗಿದ್ದರು. ಇಂಥ ದುರ್ಘಟನೆಯಲ್ಲಿ ತೀರಿಕೊಂಡ ಸುದ್ದಿಕೇಳಿ ಆಘಾತವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕೋಟ್ಯಂತರ ಅಭಿಮಾನಿಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.









