ಪುಟ್ಟ ಹೆಜ್ಜೆಗಳಿಗೆ ಫ್ಯಾಶನ್ ಲೋಕದ ಮೆರುಗು; ರಾಧಾ’ಸ್ ಮಕ್ಕಳ ಫ್ಯಾಶನ್ ಶೋಗೆ ಪ್ರೇಕ್ಷಕರು ಫಿದಾ! – ಕಹಳೆ ನ್ಯೂಸ್

ಪುತ್ತೂರು: ಪುಟಾಣಿಗಳ ಮುದ್ದಾದ ನಗು, ಬಣ್ಣಬಣ್ಣದ ಉಡುಪುಗಳ ಆಕರ್ಷಣೆ, ಸಂಗೀತದ ಲಯಕ್ಕೆ ತಕ್ಕ ಹೆಜ್ಜೆಗಳು… ಮಕ್ಕಳ ವೈಯ್ಯಾರದ ನಡಿಗೆಗೆ ಪ್ರೇಕ್ಷಕರು ಮನಸೋತ ಕ್ಷಣಗಳು. ಇಂತಹ ಸುಂದರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ರಾಧಾ’ಸ್ ಜವುಳಿ ಮಳಿಗೆ.
ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್ 14ರಂದು ರಾಧಾ’ಸ್ ಜವುಳಿ ಮಳಿಗೆಯ ವತಿಯಿಂದ ಪುಟಾಣಿಗಳಿಗಾಗಿ ವಿಶೇಷ ಫ್ಯಾಶನ್ ಶೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸಾಂಪ್ರದಾಯಿಕ ಉಡುಗೆಗಳಿಂದ ಹಿಡಿದು ಆಧುನಿಕ ಫ್ಯಾಶನ್ ಉಡುಪುಗಳವರೆಗೆ ವಿವಿಧ ವಿನ್ಯಾಸದ ವಸ್ತ್ರಗಳನ್ನು ಧರಿಸಿ ಮಕ್ಕಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಮುದ್ದಾದ ನಗು, ಆಕರ್ಷಕ ಭಂಗಿ ಹಾಗೂ ವಿಭಿನ್ನ ವೇಷಭೂಷಣಗಳ ಮೂಲಕ ಪುಟಾಣಿಗಳು ತಮ್ಮದೇ ಆದ ಶೈಲಿಯಲ್ಲಿ ಗಮನ ಸೆಳೆದರು. ಮಕ್ಕಳ ಪ್ರತಿಭೆ ಹಾಗೂ ಆತ್ಮವಿಶ್ವಾಸಕ್ಕೆ ವೇದಿಕೆಯಾದ ಈ ಸ್ಪರ್ಧೆ ಪೋಷಕರಲ್ಲೂ ಸಂಭ್ರಮ ಮೂಡಿಸಿತು.
ಎರಡು ವಿಭಾಗಗಳಲ್ಲಿ 37 ಮಂದಿ ಭಾಗಿ
ಫ್ಯಾಶನ್ ಶೋ ಸ್ಪರ್ಧೆಯನ್ನು 1ರಿಂದ 7 ವರ್ಷ ಹಾಗೂ 8ರಿಂದ 14 ವರ್ಷದ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಮೊದಲ ವಿಭಾಗದಲ್ಲಿ 28 ಮಂದಿ ಹಾಗೂ ಎರಡನೇ ವಿಭಾಗದಲ್ಲಿ 9 ಮಂದಿ ಸೇರಿದಂತೆ ಒಟ್ಟು 37 ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
1ರಿಂದ 7 ವರ್ಷದ ವಿಭಾಗದಲ್ಲಿ ಚರೀಷ್ಮಾ ಬಿ. ಸಿರೋಡ್ ಪ್ರಥಮ, ಲಿಷಾ ದೀಪಕ್ ಸುರತ್ಕಲ್ ದ್ವಿತೀಯ ಹಾಗೂ ನಕ್ಷತ್ರ ಎಸ್. ಆಚಾರ್ಯ ಅನಂತಾಡಿ ತೃತೀಯ ಸ್ಥಾನ ಪಡೆದರು.
8ರಿಂದ 14 ವರ್ಷದ ವಿಭಾಗದಲ್ಲಿ ಪ್ರಾಶ್ವಿ ಎಸ್.ಕೆ. ಸುಳ್ಯ ಪ್ರಥಮ, ಹೆಚ್. ವಂಶಿಕಾ ಪುತ್ತೂರು ದ್ವಿತೀಯ ಹಾಗೂ ಅದ್ವಿಕ್ ಎಸ್. ಆಚಾರ್ಯ ಪುತ್ತೂರು ತೃತೀಯ ಸ್ಥಾನ ಪಡೆದುಕೊಂಡರು.
ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಯನಾಶ್ರೀ ಅವರು ತೀರ್ಪುಗಾರರಾಗಿ ಸಹಕರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಮಾಲಕರಾದ ಪ್ರಕಾಶ್ ಕಾಮತ್, ಗಣೇಶ್ ಕಾಮತ್ ಹಾಗೂ ಸಂಜಯ ಕಾಮತ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಪುಟ್ಟ ಪುಟ್ಟ ಹೆಜ್ಜೆಗಳ ಮೂಲಕ ಮಕ್ಕಳ ಪ್ರತಿಭೆ, ಆತ್ಮವಿಶ್ವಾಸ ಮತ್ತು ಫ್ಯಾಶನ್ ಲೋಕದ ಸೊಬಗನ್ನು ಅನಾವರಣಗೊಳಿಸಿದ ರಾಧಾ’ಸ್ನ ಈ ವಿಶೇಷ ಕಾರ್ಯಕ್ರಮ ಮಕ್ಕಳ ದಿನಾಚರಣೆಗೆ ಮತ್ತಷ್ಟು ಮೆರುಗು ನೀಡಿತು.











