
ಉಜ್ಜೀವನ ಹಿರಿಯ ನಾಗರಿಕರ ಬಡಾವಣೆಯ ದ್ವಾರಕಾ ನೆಸ್ಟ್ ನ ನೂತನ ಹವಾನಿಯಂತ್ರಿತ ಕೊಠಡಿಗಳ ಉದ್ಘಾಟನಾ ಸಮಾರಂಭ ದಿನಾಂಕ 06-11-2026ರಂದು ನೆರವೇರಿತು.
ನೂತನ ಅತಿಥಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಕೃಷ್ಣ ಶೆಟ್ಟಿ ಕಡಬ ಅವರು “ಉಜ್ಜೀವನ ಹಿರಿಯ ನಾಗರಿಕರ ಬಡಾವಣೆಯ ನಿರ್ಮಾಣದ ಮೂಲಕ ಕೆಮ್ಮಾರದಲ್ಲಿ ದ್ವಾರಕಾ ಸಂಸ್ಥೆಯು ಹೊಸ ವಾತಾವರಣವನ್ನು ಸೃಷ್ಟಿ ಮಾಡಿದೆ. ನಿವೃತ್ತ ಜೀವನದ ಚಿಂತೆಗೆ ಪರಿಹಾರವಾಗಿ ಎಲ್ಲಾ ಸೌಕರ್ಯಗಳನ್ನು ಒಂದೇ ಸ್ಥಳದಲ್ಲಿ ಒದಗಿಸಿ ಹಿರಿಯ ಜೀವಗಳಿಗೆ ಸುಂದರವಾದ ಬದುಕು ಕಟ್ಟಿಕೊಡುವ ಕೆಲಸವನ್ನು ಈ ಸಂಸ್ಥೆ ಮಾಡಿದೆ ಎಂದು ಬಣ್ಣಿಸಿದರು.
ಇಂತಹ ಯೋಜನೆಗಳು ನಾಗರಿಕರ ಕಾಳಜಿಯ ಜೊತೆಗೂ ದೇಶವೇ ಮೆಚ್ಚುವ ಕೆಲಸವಾಗಿದೆ. ಕಡಬದಲ್ಲಿ ಸಂಸ್ಥೆಯಿಂದ ನಿರ್ಮಾಣಗೊಳ್ಳಲಿರುವ ಮುಂದಿನ ಬಡಾವಣೆ ಯೋಜನೆಯೂ ಕೂಡ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.
ಹೊಸಮಠ ಶ್ರೀಪೂರ್ಣ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದ ಆಯುರ್ವೇದ ವೈದ್ಯ ಡಾ. ಸುರೇಶ್ ಕುಮಾರ್ ಕೂಡೂರು ಅವರು ಮಾತನಾಡಿ “ಒತ್ತಡ ಹಾಗೂ ಏಕಾಂಕಿತನದ ಕಾರಣದಿಂದ ಹಿರಿಯ ನಾಗರಿಕರು ವಸತಿ ಸಮುಚ್ಚಯದಲ್ಲಿ ವಾಸಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಆದರೆ ಬಡಾವಣೆಗಳಲ್ಲಿ ವ್ಯಾಯಾಮ ಚಟುವಟಿಕೆ, ಯೋಗ, ಧ್ಯಾನ, ವಾಕಿಂಗ್ ಸಹಿತ ಎಲ್ಲಾ ಸೌಕರ್ಯಗಳು ಇದ್ದಾಗ ಒತ್ತಡ ದೂರವಾಗಿ ಆರೋಗ್ಯಯುತ ಜೀವನ ನಡೆಸಬಹುದಾಗಿದೆ. ಅಂತಹ ಅವಕಾಶ ಉಜ್ಜೀವನದಲ್ಲಿದೆ ಎಂದು ಹೇಳಿದರು.
ಶರವೂರು ದುರ್ಗಾಪರಮೇಶ್ವರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಹೇಮಂತ ರೈ ಮನವಳಿಕೆಗುತ್ತು ಅವರು ಮಾತನಾಡಿ, ದೇಶ ಅಭಿವೃದ್ಧಿ ಹೊಂದಬೇಕಾದರೆ ಗ್ರಾಮದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ದ್ವಾರಕಾ ಸಂಸ್ಥೆಯ ಯೋಜನೆಗಳು ಇದಕ್ಕೆ ಪೂರಕವಾಗಿದೆ. ಉಜ್ಜೀವನದಲ್ಲಿ 200ಕ್ಕೂ ಅಧಿಕ ಮನೆ, ಹೊಟೇಲ್, ಲಾಡ್ಜ್ ನಿರ್ಮಾಣದಿಂದ ಅನೇಕರಿಗೆ ಉದ್ಯೋಗ ಜೊತೆಗೆ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದರು.
ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅಧ್ಯಕತೆ ವಹಿಸಿ, “ನಮ್ಮ ಉಜ್ಜೀವನ ಬಡಾವಣೆಯಲ್ಲಿ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಭದ್ರತೆ ಕಲ್ಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಇದ್ದಾಗ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ. ಉಜ್ಜೀವನದಲ್ಲಿ ಇರುವ ಎಲ್ಲಾ ಸೌಲಭ್ಯಗಳು ಈ ಭಾಗದ ಜನರಿಗೆ ಸಿಗುವಂತಾಗಲಿ” ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ದೀಪಾವಳಿ ಪ್ರಯುಕ್ತ ಸಂಸ್ಥೆ ನೀಡಿರುವ ವಿಶೇಷ ಆಫರ್ ಅನ್ನು ಬಿಡುಗಡೆ ಗೊಳಿಸಲಾಯಿತು. ದೀಪಾವಳಿ ಸಮಯದಲ್ಲಿ ಮನೆ/ಸೈಟ್ ಖರೀದಿಸಿದವರಿಗೆ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆದುಕೊಳ್ಳುವ ಅವಕಾಶ ಇರಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ನವೀನ್ ಭಂಡಾರಿ ಅವರು ಭಾಗವಹಿಸಿ, ಶುಭ ಹಾರೈಸಿದರು. ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಅಮೃತಕೃಷ್ಣ ಎನ್. ಸ್ವಾಗತಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ದ್ವಾರಕಾ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ದುರ್ಗಾ ಗಣೇಶ್ ಪ್ರಾರ್ಥಿಸಿದರು. ಉಜ್ಜೀವನ ಬಡಾವಣೆಯ ಮ್ಯಾನೇಜರ್ ನವೀನಕೃಷ್ಣ ಎಸ್. ಉಪ್ಪಿನಂಗಡಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು, ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿದರು.










