
ಉಡುಪಿ : ಬಾಳೆಕುದ್ರು ಶ್ರೀಮಠಕ್ಕೆ ಸೇರಿದ ಪ್ರಾಚೀನ ಮೂರ್ತಿಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಹಾಗೂ ಈ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಮಠದ ಆಡಳಿತಾಧಿಕಾರಿ ಎ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಉಲ್ಲೇಖಿಸಲಾದ ಎಲ್ಲಾ ಮೂರ್ತಿಗಳು ಶ್ರೀಗಳ ವಶದಲ್ಲಿ ಮಠದ ಒಳಗಡೆಯೇ ಸುರಕ್ಷಿತವಾಗಿವೆ. ಶ್ರೀಗಳು ಮತ್ತು ಸಿಬ್ಬಂದಿ ಮಠಕ್ಕೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂಬ ಆರೋಪವೂ ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ದೂರಿನಲ್ಲಿ ಹೆಸರಿಸಲಾದ ಶ್ರೀಗಳು ಮತ್ತು ಸಿಬ್ಬಂದಿ ಕಾನೂನು ಪ್ರಕ್ರಿಯೆಗಳ ನಿಮಿತ್ತ ಮಠದಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಮಠದಲ್ಲಿ ನಡೆಯುವ ನಿತ್ಯ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಅಡೆತಡೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ನೀಡಲಾಗುವುದು ಎಂದು ಎ. ಅನಿಲ್ ಕುಮಾರ್ ಹೇಳಿದ್ದಾರೆ.











