ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ಹೌತಿ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ದುರ್ಮರಣ – ಕಹಳೆ ನ್ಯೂಸ್

ಹೈದರಾಬಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಹೈದರಾಬಾದ್‌ನ ಮೆಹದಿಪಟ್ನಂ ನಿವಾಸಿಯಾದ ಮೊಹಮ್ಮದ್ ಯೂಸುಫ್ ಅಲಿ ಶನಿವಾರ (ಅ. 10) ನಡೆದ ಮೊದಲ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಓರ್ವ ಪುತ್ರನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಮತ್ತೋರ್ವ ಪುತ್ರನ ಕಾಲಿನ ಮೂರು ಬೆರಳುಗಳು ಕತ್ತರಿಸಿಹೋಗಿವೆ. ಯೂಸುಫ್ ಅವರ ಪತ್ನಿ ಮತ್ತು ಪುತ್ರಿ ಸುರಕ್ಷಿತವಾಗಿದ್ದು, ಜೊತೆಯಲ್ಲಿದ್ದ ಚಿಕ್ಕಮ್ಮನ ತಲೆಗೆ ಪೆಟ್ಟಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಐಎಂಐಎಂ (AIMIM) ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಹೈದರಾಬಾದಿನ ಮೊಹಮ್ಮದ್ ಯೂಸುಫ್ ಅಲಿ ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಇಬ್ಬರು ಪುತ್ರರೂ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ರಿಯಾದ್‌ನಲ್ಲಿರುವ ಯೂಸುಫ್ ಅವರ ಸಂಬಂಧಿಕರು ಹಾಗೂ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ (DCM) ಅವರೊಂದಿಗೆ ಮಾತನಾಡಿದ್ದೇನೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ಕಲ್ಪಿಸಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡುತ್ತೇನೆ ಎಂದು ಓವೈಸಿ ಎಕ್ಸ್‌ನಲ್ಲಿ ಹೇಳಿದ್ದಾರೆ.











