ಹಿಂದೆ ಸಂಕಷ್ಟ ಬಂದಾಗ ನಲುಗುತ್ತಿತ್ತು, ಆದರೆ ಈಗ ಬಿಕ್ಕಟ್ಟು ಎದುರಾದಾಗ ಭಾರತದ ಬಗ್ಗೆ ವಿಶ್ವವೇ ಚರ್ಚಿಸುತ್ತೆ: ಮೋದಿ – ಕಹಳೆ ನ್ಯೂಸ್

ನವದೆಹಲಿ: ಹಿಂದೆ ಸಂಕಷ್ಟ ಬಂದಾಗ ದೇಶ ನಲುಗುತ್ತಿತ್ತು, ಆದರೆ ಇಂದು ಜಾಗತಿಕವಾಗಿ ಯಾವುದೇ ಬಿಕ್ಕಟ್ಟು ಎದುರಾದರೂ ಭಾರತದ ಆಂತರಿಕ ಶಕ್ತಿ ಮತ್ತು ನಮ್ಮ ಆಡಳಿತ ನೀತಿಗಳ ಬಗ್ಗೆ ವಿಶ್ವವೇ ಚರ್ಚಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸರ್ಕಾರದ ಸಾಧನೆಯನ್ನು ಕೊಂಡಾಡಿದ್ದಾರೆ.
ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ದೇಶದ ಜನತೆಯೇ ಕಾರಣ. ನನಗೆ ‘ಜನತೆಯೇ ಜನಾರ್ದನ’. ಕೋಟ್ಯಂತರ ನಾಗರಿಕರ ಅಚಲ ವಿಶ್ವಾಸ ಮತ್ತು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮವೇ ನನ್ನ ಅತಿ ದೊಡ್ಡ ಶಕ್ತಿ. ದೇಶ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ದೇಶಕ್ಕೆ ಸಂಪೂರ್ಣ ಉತ್ತರದಾಯಿಯಾಗಿದ್ದೇನೆ ಎಂದರು.
ಇಂದು ಮುಂಜಾನೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದಾಗ ನನಗಾಗಿ ಕೇವಲ ಒಂದೇ ಒಂದು ಕೋರಿಕೆ ಕೇಳಿಕೊಂಡೆ. ನನ್ನಲ್ಲಿ ಕಲಿಯುವ ಆಸಕ್ತಿ ಯಾವತ್ತೂ ಕಡಿಮೆ ಆಗಬಾರದು ಎಂಬುದೇ ಆ ಪ್ರಾರ್ಥನೆ. ನಾನು ಎಷ್ಟು ಕಲಿಯುತ್ತೇನೋ, ಅಷ್ಟೂ ಅನುಭವವನ್ನು ದೇಶಸೇವೆಗಾಗಿ ಧಾರೆ ಎರೆಯುತ್ತೇನೆ. ನನ್ನ ಜೀವನದಲ್ಲಿ ಯಾವುದೇ ಘಟನೆಯೂ ವ್ಯರ್ಥವಾಗಿಲ್ಲ. ನನ್ನನ್ನು ಕೆಡವಲು ಯತ್ನಿಸಿದವರಿಂದ ಮತ್ತೆ ಪುಟಿದೆದ್ದು ನಿಲ್ಲುವುದನ್ನು, ಟೀಕಾಕಾರರಿಂದ ಆತ್ಮವಿಮರ್ಶೆಯನ್ನು, ವಿರೋಧಿಗಳಿಂದ ಪ್ರಜಾಪ್ರಭುತ್ವದ ಅಸಲಿ ಶಕ್ತಿಯನ್ನು ಹಾಗೂ ಕೊರೊನಾ ಮಹಾಮಾರಿಯಿಂದ ಸದಾ ಸನ್ನದ್ಧವಾಗಿರುವುದನ್ನು ಕಲಿತಿದ್ದೇನೆ ಎಂದು ತಿಳಿಸಿದರು.
2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ(Gujarat CM ) ಪ್ರಮಾಣ ವಚನ ಸ್ವೀಕರಿಸಿದ ಕ್ಷಣವನ್ನು ಸ್ಮರಿಸಿದ ಮೋದಿ, “ಅಂದು ನನಗೆ ಸರ್ಕಾರ ನಡೆಸಿದ ಯಾವುದೇ ಆಡಳಿತಾತ್ಮಕ ಅನುಭವವಿರಲಿಲ್ಲ. ಆದರೆ ಜನಸೇವೆಯ ಅನುಭವ ಮತ್ತು ಜನರ ಮೇಲಿದ್ದ ನಂಬಿಕೆಯೇ ನನ್ನ ಬಲವಾಗಿತ್ತು. ಚುನಾವಣೆ ಎದುರಿಸಿ ಅಧಿಕಾರ ಹಿಡಿಯುವುದು ನನ್ನ ಕನಸಾಗಿರಲಿಲ್ಲ. ಗುಡ್ಡಗಾಡು, ಆದಿವಾಸಿ ಭಾಗಗಳಲ್ಲಿ ಸಮಾಜಸೇವೆ ಮಾಡುವುದೇ ನನ್ನ ಧ್ಯೇಯವಾಗಿತ್ತು. 2014ರಲ್ಲಿ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡಾಗ ಆರ್ಥಿಕತೆ ಹದಗೆಟ್ಟಿತ್ತು, ಹಣದುಬ್ಬರ ಗಗನಕ್ಕೇರಿತ್ತು. ಆದರೆ ಇಂದು ದೇಶದ ಪ್ರಧಾನ ಸೇವಕನಾಗಿ 12 ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕ ಮತ್ತು ಜಾಗತಿಕ ಚಿತ್ರಣವೇ ಬದಲಾಗಿದೆ ಎಂದು ತಮ್ಮ ಸರ್ಕಾರವನ್ನು ಕೊಂಡಾಡಿದರು.
ಭವಿಷ್ಯದ ಸಂಕಲ್ಪ:
ಈ 25 ವರ್ಷಗಳ ಮೈಲಿಗಲ್ಲು ಕೇವಲ ಹಬ್ಬದ ಆಚರಣೆಯಲ್ಲ, ಬದಲಿಗೆ ಮುಂದಿನ ಗುರಿಗಳನ್ನು ತಲುಪಲು ಪ್ರೇರಣೆ ಎಂದು ಸ್ಪಷ್ಟಪಡಿಸಿದ ಮೋದಿ 5 ಸಂಕಲ್ಪ ಕೈಗೊಂಡರು. 2047ರ ವೇಳೆಗೆ ವಿಕಸಿತ ಭಾರತವಾಗಬೇಕು. ಭಾರತವನ್ನು ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸಬೇಕು. ಭಾರತ ಉತ್ಪಾದನಾ ಕೇಂದ್ರವಾಗಿ ಬದಲಾಗಬೇಕು. ಒಲಿಂಪಿಕ್ಸ್ ಆಯೋಜಿಸಬೇಕು. ಭಾರತೀಯರು ಬಾಹ್ಯಾಕಾಶಕ್ಕೆ ಗಗನಯಾತ್ರೆ ಕೈಗೊಳ್ಳಬೇಕು ಎಂದು ತಿಳಿಸಿದರು.











