ರಷ್ಯಾ ಕರಾವಳಿಯಲ್ಲಿ ಉಕ್ರೇನ್ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್, 23 ಭಾರತೀಯ ಸಿಬ್ಬಂದಿ ಪಾರು – ಕಹಳೆ ನ್ಯೂಸ್

ಮಾಸ್ಕೋ: ರಷ್ಯಾದ ಕಪ್ಪು ಸಮುದ್ರ ಕರಾವಳಿಯ ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊಂದಿದ ತೈಲ ಟ್ಯಾಂಕರ್ಮೇ ಲೆ ಉಕ್ರೇನ್ ನೌಕಾ ಡ್ರೋನ್ ಭೀಕರ ದಾಳಿ ನಡೆಸಿದೆ.
ದಾಳಿಯ ಬೆನ್ನಲ್ಲೇ ಹಡಗಿನಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ 23 ಮಂದಿ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರಸಿದ್ಧ ಪ್ರವಾಸಿ ತಾಣವಾದ ಸೋಚಿ ನಗರದ ಸಮೀಪ ಈ ದಾಳಿ ನಡೆದಿದೆ. ಸಮುದ್ರದ ಮಧ್ಯೆ ಹಡಗು ಹೊತ್ತಿ ಉರಿಯುತ್ತಿದ್ದು, ಕಪ್ಪು ಹೊಗೆಯ ದಟ್ಟ ಮೋಡ ಆಕಾಶಕ್ಕೆ ಚಿಮ್ಮುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬೆಂಕಿಯ ತೀವ್ರತೆ ಹೆಚ್ಚಿರುವ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ಸದ್ಯ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸಮುದ್ರದ ಮೇಲ್ಮೈಯಲ್ಲಿ ಕಚ್ಚಾ ತೈಲ ವ್ಯಾಪಕವಾಗಿ ಹರಡಿ ಉರಿಯುತ್ತಿದ್ದು, ಜ್ವಾಲೆಯ ತೀವ್ರತೆ ಕಡಿಮೆಯಾದ ನಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ರಷ್ಯಾ ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೋಚಿ ನಗರದ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.











