ಅನ್ನದಾತನ ಸಮಸ್ಯೆಗೆ ಬಿಜೆಪಿ ಜಿಲ್ಲಾ ಮೋರ್ಚಾಗಳಿಂದ ಅಹೋರಾತ್ರಿ ಶ್ರಮ: ಕುತ್ಯಾರು ನವೀನ್ ಶೆಟ್ಟಿ – ಕಹಳೆ ನ್ಯೂಸ್

ಉಡುಪಿ: ರೈತರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸಲು ಬಿಜೆಪಿ ಜಿಲ್ಲಾ ರೈತ ಮೋರ್ಚಾದೊಂದಿಗೆ ಪಕ್ಷದ ಎಲ್ಲಾ ಮೋರ್ಚಾಗಳು ಒಂದು ತಂಡವಾಗಿ ಅಹೋರಾತ್ರಿ ಶ್ರಮಿಸಲು ಸಿದ್ಧವಾಗಿವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದ್ದಾರೆ. ಇತ್ತೀಚೆಗೆ ನಡೆದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪದಾಧಿಕಾರಿಗಳು ಮಂಡಿಸಿದ ಪ್ರಸ್ತಾವನೆಗೆ ಸ್ಪಂದಿಸಿದ ಅವರು, “ಅನ್ನ ನೀಡುವ ರೈತ ಕಷ್ಟಪಡುವ ನಿಜವಾದ ಶ್ರಮಜೀವಿ. ಪ್ರಸಕ್ತ ಸರ್ಕಾರದ ಅನೇಕ ನೀತಿಗಳು ರೈತರ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಗ್ರಾಮ ಮಟ್ಟದಲ್ಲಿ ಪ್ರತಿಯೊಬ್ಬ ರೈತನ ಸಂಕಷ್ಟಗಳನ್ನು ಗುರುತಿಸಿ, ಅವರಿಗೆ ನ್ಯಾಯ ಒದಗಿಸಿಕೊಡಲು ಬಿಜೆಪಿ ಬದ್ಧವಾಗಿದೆ. ರೈತರ ಸಮಸ್ಯೆಗಳ ಪಟ್ಟಿ ತಯಾರಿಸಿ, ಎಲ್ಲರನ್ನು ಒಟ್ಟುಗೂಡಿಸಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಸಿಗುವವರೆಗೆ ವಿಶ್ರಮಿಸದೆ ಹೋರಾಡಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
”ರೈತರು, ಕಾರ್ಮಿಕರು, ದೇಶ ಮತ್ತು ಪಕ್ಷದ ಪರವಾಗಿ ನಿಂತು ಕೆಲಸ ಮಾಡಿದ ತೃಪ್ತಿ ನಮ್ಮದಾಗಬೇಕು” ಎಂದು ನವೀನ್ ಶೆಟ್ಟಿ ಇದೇ ವೇಳೆ ಆಶಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಅವರು ಮುಂದಿನ ದಿನಗಳಲ್ಲಿ ರೈತ ಮೋರ್ಚಾ ಪದಾಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಷೆ ಮತ್ತು ಕಾರ್ಯಾಚರಣೆಯ ಬಗ್ಗೆ ವಿಸ್ತೃತ ವಿವರಣೆ ನೀಡಿದರು.
ಸಭೆಯ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ, ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯಕ್ ಹಾಗೂ ಜಿಲ್ಲಾ ರೈತ ಮೋರ್ಚಾ ಉಸ್ತುವಾರಿ ಶ್ರೀಮತಿ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುಷ್ಪರಾಜ್ ಸ್ವಾಗತಿಸಿ, ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮ್ ಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾ ರೈತ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ, ರೈತರ ಹಿತರಕ್ಷಣೆ ಮತ್ತು ಸಮಸ್ಯೆಗಳ ಪರಿಹಾರದ ಕುರಿತು ಸುದೀರ್ಘ ಚರ್ಚೆ ನಡೆಸಿದರು.











