ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮಅವರಿಗೆ ಸಿಟಿ ಸೆಂಟರ್ ಮಾಲ್ ಮತ್ತು ಮೋತಿ ಶ್ಯಾಮ್ ಬಿಲ್ಡರ್ಸ್ ವತಿಯಿಂದ ಅಭಿನಂದನಾ ಸಮಾರಂಭ : ಚಿನ್ನದ ಹುಡುಗಿ ಬೇಸರಕ್ಕೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ – ಕಹಳೆ ನ್ಯೂಸ್

ಮಂಗಳೂರು: ಬದುಕಿನಲ್ಲಿ ಆನೇಕ ಏಳು, ಬೀಳು, ಗಾಯದ ಸಮಸ್ಯೆಗಳನ್ನು ಎದುರಿಸಿದ್ದೇನೆ. ಸೋತು ಗೆದ್ದಿದ್ದೇನೆ. ಎಲ್ಲವನ್ನು ಬದುಕಿನಲ್ಲಿ ನೋಡಿದ್ದೇನೆ. ಸಾಧನೆಗೆ ವಯಸ್ಸು ಅಡ್ಡಿಯಾಗದು. ಮುಂದಿನ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕದೊಂದಿಗೆ ವಾಪಸಾಗುತ್ತೇನೆ ಎಂಬ ವಿಶ್ವಾಸವಿದೆ ಎಂದು ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್‌ನ 400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಚಿನ್ನ ಮತ್ತು 400 ಮೀ. ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರು ಸಿಟಿ ಸೆಂಟರ್ ಮಾಲ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಏಶ್ಯನ್ ರಿಲೇ ಸ್ಪರ್ಧೆಯ ಅನುಭವ ಹಂಚಿಕೊಂಡ ಪೂವಮ್ಮ, ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿತ್ತು. ಹೀಗಾಗಿ ಈ ಬಾರಿ ಮಾಡು ಇಲ್ಲವೇ ಮಡಿ ತಂತ್ರದೊಂದಿಗೆ ಕಣಕ್ಕಿಳಿದು ಚಿನ್ನ ಗೆಲ್ಲಲೇಬೇಕೆಂಬ ದೃಢ ನಿರ್ಧಾರ ಮಾಡಿದ್ದೆವು. ಬಹರೈನ್ ಹಾಗೂ ಚೀನಾ ಅಥ್ಲೀಟ್‌ಗಳ ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದೆವು. ಅಥ್ಲೆಟಿಕ್ ಮೈದಾನದಲ್ಲಿ ಭಾರತದ ರಾಷ್ಟ್ರ ಗೀತೆ ಮೊಳಗಿದ ಕ್ಷಣ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿತ್ತು ಎಂದರು.
ಅಂತಾರಾಷ್ಟ್ರೀಯ ಮತ್ತು ವಿಶ್ವ ಮಟ್ಟದಲ್ಲಿ ಪದಕ ಗೆಲ್ಲುವ ಕ್ರೀಡಾ ಪಟುಗಳಿಗೆ ಕೇಂದ್ರ ಸರಕಾರದಿಂದ ಪ್ರೋತ್ಸಾಹ ಚೆನ್ನಾಗಿದೆ. ಆದರೆ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರಕಾರದಿಂದ ದೊರೆಯುವ ಪ್ರೋತ್ಸಾಹ ಧನ ತೀರ ಕಡಿಮೆ ಇದ್ದು, ಉಳಿದ ರಾಜ್ಯಗಳ ಮಾದರಿಯಲ್ಲಿ ತಕ್ಷಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪೂವಮ್ಮ ಅವರ ಬೇಸರಕ್ಕೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಮಾದರಿಯಲ್ಲೇ ಸಮಾನ ಪ್ರಮಾಣದ ಪ್ರೋತ್ಸಾಹಧನ, ಸರಕಾರಿ ಉದ್ಯೋಗ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಪೂವಮ್ಮ ಅವರ ತಾಯಿ ಅವರ ವೀಡಿಯೊ ಹೇಳಿಕೆಯನ್ನು ನಾನು ಗಮನಿಸಿದ ತಕ್ಷಣ ಕ್ರೀಡಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ವೀಡಿಯೊವನ್ನು ಅವರಿಗೆ ಫಾರ್ವರ್ಡ್ ಮಾಡಲಾಗಿದೆ. ಇತರ ರಾಜ್ಯಗಳು ನೀಡುವಷ್ಟೇ ಸಮಾನ ಮೊತ್ತದ ನಗದು ಬಹುಮಾನವನ್ನು ನಮ್ಮ ರಾಜ್ಯದ ಕ್ರೀಡಾಪಟುಗಳಿಗೂ ಒದಗಿಸಲು ಕ್ರೀಡಾ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪೂವಮ್ಮ ಅವರನ್ನು ಸಿಟಿ ಸೆಂಟರ್ ಮಾಲ್ ಮತ್ತು ಮೋತಿ ಶ್ಯಾಮ್ ಬಿಲ್ಡರ್ಸ್ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಈ ವೇಳೆ ಪೂವಮ್ಮ ಅವರ ತಾಯಿ ಜಾಜಿ ರಾಜು, ತಂದೆ ಎಂಜಿ ರಾಜು, ಪತಿ ಜಿತಿನ್ ಪಾಲ್, ಮೋತಿಶ್ಯಾಂ ಸಂಸ್ಥೆಯ ನಿರ್ದೇಶಕರಾದ ಸೈಯದ್ ಮುಹಮ್ಮದ್ ಅರ್ಶದ್, ಸೈಯದ್ ಮುಹಮ್ಮದ್ ಸವೊದ್, ಪೂವಮ್ಮರ ತರಬೇತುದಾರ ದಿನೇಶ್ ಕುಂದರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮುಡಾ ಮಾಜಿ ಅಧ್ಯಕ್ಷ ತೇಜೋಮಯ ಮತ್ತಿತರರು ಉಪಸ್ಥಿತರಿದ್ದರು.










