Recent Posts

Wednesday, September 16, 2026
ಸುದ್ದಿ

ಸಂತ ಫಿಲೋಮೀನಾ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ : ಮಕ್ಕಳಲ್ಲಿ ಆತ್ಮವಿಶ್ವಾಸ, ಜೀವನಪ್ರಜ್ಞೆ ಬೆಳೆಸುವುದು ಪೋಷಕರ ಜವಾಬ್ದಾರಿ: ಪ್ರೊ. ದಾಮೋದರ ಕಣಜಾಲು- ಕಹಳೆ ನ್ಯೂಸ್

ಪುತ್ತೂರು  : ಸಂತ ಫಿಲೋಮೀನಾ (ಸ್ವಾಯತ್ತ) ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು  ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿಯ ಪ್ರಾಂಶುಪಾಲರಾದ ಪ್ರೊ. ದಾಮೋದರ ಕಣಜಾಲು ಅವರು ‘ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಪೋಷಕರ ಕಾಳಜಿ’ ವಿಷಯದ ಕುರಿತು ಮಾಹಿತಿ ನೀಡಿದರು.

ಜಾಹೀರಾತು

“ಮಕ್ಕಳ ಬಗ್ಗೆ ಪೋಷಕರು ಅತಿಯಾದ ಕಾಳಜಿ ವಹಿಸುವ ಅಗತ್ಯವಿಲ್ಲ; ಬದಲಾಗಿ ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವಂತೆ ಬೆಳೆಸಬೇಕು. ಕೆಲವು ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳು ಹಾಗೂ ಮನೋಭಾವವನ್ನು ತಿಳಿದುಕೊಳ್ಳಲು ಸೂಕ್ತ ಗಮನ ಹರಿಸುವುದಿಲ್ಲ. ಮಕ್ಕಳು ದಾರಿ ತಪ್ಪಿದ ಬಳಿಕ ಅವರನ್ನು ಸರಿದಾರಿಗೆ ತರುವುದು ಕಷ್ಟವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂದು ಸಲಹೆ ನೀಡಿ,“ಮಕ್ಕಳಿಗೆ ಬೀಗುವುದನ್ನಲ್ಲ, ಬಗ್ಗುವುದನ್ನು ಕಲಿಸಬೇಕು. ಈ ಮೌಲ್ಯಗಳು ಅವರಲ್ಲಿ ಮೂಡಬೇಕು. ಇದರಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶ ದೊರೆಯುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ‘ಜೀವನದಲ್ಲಿ ನಾನು ಏನನ್ನೋ ಸಾಧಿಸುತ್ತಿದ್ದೇನೆ’ ಎಂಬ ಆತ್ಮಸಂತೃಪ್ತಿಯ ಜೀವನವನ್ನು ಕಟ್ಟಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ” ಎಂದು ಪ್ರೊ. ದಾಮೋದರ ಕಣಜಾಲು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಫಿಲೋಮೀನಾ ಕಾಲೇಜಿನ ಸಂಚಾಲಕರಾದ ಅತಿ ವಂI ಡಾI ಜಾನ್ ಬಿ. ಸಲ್ದಾನ್ಹಾ. ಅವರು ಜೆನ್‌-ಜಿ ಪೀಳಿಗೆಯ ಕುರಿತು ಮಾತನಾಡಿ, “ಮಕ್ಕಳಲ್ಲಿ ಪ್ರಶ್ನಿಸುವ ಅಭ್ಯಾಸ ಬೆಳೆಯಬೇಕು. ಅವರಿಗೆ ಮೂಲಭೂತ ಅಗತ್ಯಗಳು ದೊರೆಯುವಂತಾಗಬೇಕು. ಅವರು ಉತ್ತಮ ಕೆಲಸ ಹಾಗೂ ಉತ್ತಮ ಜೀವನದತ್ತ ಸಾಗಲು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಮಕ್ಕಳ ಪ್ರಶ್ನೆಗಳಿಗೆ ನಾವು ಸರಿಯಾದ ಉತ್ತರಗಳನ್ನು ನೀಡಬೇಕಾಗಿದೆ” ಎಂದರು. ಲಿಂಗ ಸಮಾನತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, “ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಅಗತ್ಯವಿದೆ” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ವಂIಡಾI ಆ್ಯಂಟನಿ ಪ್ರಕಾಶ್ ಮೊಂತೇರೊ, ಕಾರ್ಯಕ್ರಮಕ್ಕೆ ಪ್ರಸ್ತಾವಿಕ ನುಡಿಗಳನ್ನಾಡಿದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಶ್ರೀ ಪ್ರಶಾಂತ್ ರೈ ಅವರು ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಶ್ರೀಮತಿ ಪ್ರೇಮಲತಾ ಕೆ. ಅವರು ಆಯವ್ಯಯ ಪತ್ರ ಮಂಡಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ. ರಾಧಾಕೃಷ್ಣ ಗೌಡ ವಿ. ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ನಡೆಯಿತು.

ನೂತನ ಅಧ್ಯಕ್ಷರಾಗಿ ಸತೀಶ್ ನಾಯ್ಕ್, ಕಡಬ , ಉಪಾಧ್ಯಕ್ಷರಾಗಿ ಶ್ರೀಮತಿ ಮೀನಾಕ್ಷಿ ವಿ. ರೈ ಆಯ್ಕೆಯಾದರು ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಲಾಸ್ರದೋ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ವಾರಿಜ ಎಂ. ಮತ್ತು ಬಳಗ ಪ್ರಾರ್ಥಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ಅಬೂಬಕರ್ ಆರ್ಲಪದವು ಸ್ವಾಗತಿಸಿ ಕಾಲೇಜಿನ
ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಎಂ. ವಂದಿಸಿ, ಶ್ರೀಮತಿ ಶಿವಾನಿ ಮಲ್ಯ ಎನ್. ನಿರೂಪಿಸಿದರು.