Recent Posts

Saturday, September 12, 2026
ಸುದ್ದಿ

ಮುಲ್ಕಿ ದೈವಸ್ಥಾನ ಕಳವು ಪ್ರಕರಣ; 17.20 ಲಕ್ಷ ರೂ. ಮೌಲ್ಯದ ಸ್ವತ್ತು ವಶ, ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ- ಕಹಳೆ ನ್ಯೂಸ್

ಮುಲ್ಕಿ ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕುಖ್ಯಾತ ಅಂತರ್ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 17.20 ಲಕ್ಷ ರೂ. ಮೌಲ್ಯದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ.

ಜಾಹೀರಾತು

ಉಡುಪಿ ಪಡುಬಿದ್ರೆಯ ಹೆಜಮಾಡಿ ಗ್ರಾಮ ನಿವಾಸಿ ಜಾಹೀದ್ ಸಿನಾನ್(36), ಉಡುಪಿಯ ಕಾರ್ಕಳ ತಾಲೂಕಿನ ನಿಟ್ಟೆ ಪೋಸ್ಟ್ ಪಡ್ಡೆ ಅಂಗಡಿ ಹವಸ್ ನಿವಾಸಿ ಯಾಸೀನ್(36), ದಾವಣಗೆರೆಯ ಛಲವಾದಿಕೇರಿ ಗೋಕುಲನಗರ ನಿವಾಸಿ ಮಹಮದ್ ಅಫ್ರಿದಿ(26), ದಾವಣಗೆರೆಯ ಜಾಲಿನಗರ ನಿವಾಸಿ ಎಸ್.ಕೆ. ಅಬ್ದುಲ್ ಜುಮ್ಮಾನ್(26) ದಸ್ತಗಿರಿ ಮಾಡಲಾದ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.1 ರಂದು ಮಧ್ಯರಾತ್ರಿ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ತುಂಡರಿಸಿ, ಗರ್ಭಗುಡಿಯಲ್ಲಿದ್ದ ಬೆಲೆಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ದೈವದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಅ.ಕ್ರ 65/2026 ಕಲಂ 331(3), 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಯ ಕುರಿತು ವಿಶೇಷ ತಂಡವನ್ನು ರಚಿಸಿದ್ದು, ಸೆ.6 ರಂದು ಆರೋಪಿ ಜಾಹೀದ್ ಸಿನಾನ್ ಮತ್ತು ಯಾಸೀನ್ ಎಂಬಾತನ್ನು ಮುಲ್ಕಿ ಕಾರ್ನಾಡು ಎಂಬಲ್ಲಿ ಹಾಗೂ ಸೆ. 7 ರಂದು ಆರೋಪಿ ಮಹಮದ್ ಅಫ್ರಿದಿ ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ ಎಂಬಾತನನ್ನು ದಾವಣಗೆರೆಯಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳಿಂದ ಕಳವು ಮಾಡಲಾದ ಸುಮಾರು 4 ಕೆ.ಜಿ. 521 ಗ್ರಾಂ ತೂಕದ ಬೆಳ್ಳಿ ಹಾಗೂ 34.820 ಗ್ರಾಂ ತೂಕದ ಚಿನ್ನ, ಒಟ್ಟು ಅಂದಾಜು 11,20,000 ರೂ. ಮೌಲ್ಯದ ಚಿನ್ನಾಭರಣ/ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರು ಸೇರಿದಂತೆ ಸುಮಾರು 6,00,000ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ, ಆರೋಪಿಗಳಿಂದ ಒಟ್ಟು 17,20,000 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪತ್ತೆಯಿಂದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಅ.ಕ್ರ.154/2026, ಕಲಂ 331(1), 305 ಬಿಎನ್‌ಎಸ್, ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಅ.ಕ್ರ.88/2026, ಕಲಂ 331(4), 305 ಬಿಎನ್‌ಎಸ್ ಪ್ರಕರಣಗಳು ಸಹ ಪತ್ತೆಯಾಗಿರುತ್ತವೆ.

ಪ್ರಕರಣದ 1ನೇ ಆರೋಪಿಯಾದ ಜಾಹೀದ್ ಸಿನಾನ್ ಎಂಬಾತನ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ ಶೀಕಾಂತ್.ಕೆ ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಮುಲ್ಕಿ ಠಾಣಾ ಪಿ.ಎಸ್.ಐ ರಾಘವೇಂದ್ರ ನಾಯಕ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾದ ಹಾಗೂ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.