
ದಾವಣಗೆರೆ: ಅಂಗಡಿ ಮಾಲಕಿಗೆ ವಂಚಿಸಿ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಕುಖ್ಯಾತ ಇರಾನಿ ಗ್ಯಾಂಗ್‌ನ ಇಬ್ಬರು ಅಂತರ್‌ರಾಜ್ಯ ಕಳ್ಳರನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.ಆಂಧ್ರಪ್ರದೇಶ ಮೂಲದ ಕುಖ್ಯಾತ ಇರಾನಿ ಗ್ಯಾಂಗ್‌ಗೆ ಸೇರಿದ ಸೈಯದ್ ಅಬ್ಬಾಸ್ ಆಲಿ (45) ಹಾಗೂ ಹುಸೇನ್ ಭಾಷಾ (38) ಬಂಧಿತ ಆರೋಪಿಗಳು. ಈ ಇಬ್ಬರು 2025ರ ನವೆಂಬರ್‌ನಲ್ಲಿ ಕಮಂಡಲಗೊಂದಿ ಗ್ರಾಮದ ನಿವಾಸಿ ಗೀತಮ್ಮ ಎಂಬವರು ಚಿನ್ನದ ಸರ ಕದ್ದಿದ್ದರು.
ಮಹಿಳೆ ತಮ್ಮ ಅಂಗಡಿಯಲ್ಲಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಟ್ಕಾ ಖರೀದಿಸುವ ನೆಪದಲ್ಲಿ ಬಂದಿದ್ದರು. ಮಹಿಳೆ ಗುಟ್ಕಾ ನೀಡಿ ಹೋಗುತ್ತಿದ್ದಂತೆ, ಹಿಂಬದಿಯಿಂದ ಹೊಂಚು ಹಾಕಿ ಮಾಂಗಲ್ಯ ಸರವನ್ನು ಕ್ಷಣಾರ್ಧದಲ್ಲಿ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದರು. ಈ ಕುರಿತು ಗೀತಮ್ಮ ನೀಡಿದ ದೂರಿನ ಮೇರೆಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ವಿಶೇಷ ತಂಡವನ್ನು ರಚಿಸಿದ್ದರು. ಈಗ ಆರೋಪಿಗಳನ್ನು ಬಂಧಿಸಲಾಗಿದ್ದು, 4 ಲಕ್ಷ ಮೌಲ್ಯದ 42 ಗ್ರಾಂ ತೂಕದ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.











