ಉಡುಪಿ ತಾಲೂಕು ಮಟ್ಟದ ಬ್ಯಾಡ್ಮಿಂಟನ್: ಎಸ್‌ವಿಎಸ್ ಕಟ್ಪಾಡಿ ಶಾಲೆಗೆ ರನ್ನರ್ ಅಪ್ : ಶ್ರೀದೇವಿ ಜಿಲ್ಲಾ ತಂಡಕ್ಕೆ ಆಯ್ಕೆ- ಕಹಳೆ ನ್ಯೂಸ್

ಉಡುಪಿ: ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ ಇವುಗಳ ಆಶ್ರಯದಲ್ಲಿ, ಪ್ರೌಢಶಾಲೆ ಕಿದಿಯೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಡುಪಿ ತಾಲೂಕು ಮಟ್ಟದ ವಿದ್ಯಾರ್ಥಿನಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ* ಕಟ್ಪಾಡಿಯ ಎಸ್‌ವಿಎಸ್ (SVS) ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರ ತಂಡವು ರನ್ನರ್ ಅಪ್ (ದ್ವಿತೀಯ ಸ್ಥಾನ) ಪ್ರಶಸ್ತಿ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದೆ.
ಅಲ್ಲದೆ, ಪಂದ್ಯಾಟದಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ಅವರು ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿನಿಯರನ್ನು ಹಾಗೂ ಜಿಲ್ಲಾ ತಂಡಕ್ಕೆ ಆಯ್ಕೆಯಾದ ಶ್ರೀದೇವಿ ಅವರನ್ನು ಎಸ್‌ವಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರಾದ ಸತ್ಯಂದ್ರ ಪೈ ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು: ಕ್ರೀಡೆ, ಶಿಕ್ಷಣ ಅಥವಾ ಇನ್ನಿತರ ಯಾವುದೇ ಕಲೆಗಳಲ್ಲಿ ಆಸಕ್ತಿ ಇದ್ದು ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ನೀಡಲು ಎಸ್‌ವಿಎಸ್ ಸಮೂಹ ಶಿಕ್ಷಣ ಸಂಸ್ಥೆ ಸದಾ ಸಿದ್ಧವಿರುತ್ತದೆ, ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು. ಉಡುಪಿ ತಾಲೂಕು ಮಟ್ಟದ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಹಾಗೂ ಎಸ್‌ವಿಎಸ್ ಶಾಲೆಯ ಮುಖ್ಯ ಶಿಕ್ಷಕರಾದ ವಿವೇಕಾನಂದ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ವಿಜೇತರನ್ನು ಅಭಿನಂದಿಸಿದ್ದಾರೆ











