ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ನಾಯಕನಷ್ಟೇ ಅಲ್ಲ, ಉದಯೋನ್ಮುಖ ಕ್ರೀಡಾಪಟುಗಳಿಗೆ ಆಶಾಕಿರಣ: ಬಾಕ್ಸರ್ ಸಾಕ್ಷಿ ಚೌಧರಿ ಯಶಸ್ಸಿನ ಬೆನ್ನಲ್ಲಿದೆ VKF ಬೆಂಬಲ- ಕಹಳೆ ನ್ಯೂಸ್

ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ದೇಶಕ್ಕೆ ಹೆಮ್ಮೆ ತಂದಿರುವುದು ಎಲ್ಲರಿಗೂ ಗೊತ್ತು. ಆದರೆ, ತಾವು ಏರಿದ ಎತ್ತರಕ್ಕೆ ಸಮಾಜದ ಇತರ ಪ್ರತಿಭಾವಂತ ಕ್ರೀಡಾಪಟುಗಳೂ ಬೆಳೆಯಬೇಕು ಎಂಬ ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆ ಇಂದು ಭಾರತದ ಕ್ರೀಡಾ ಭವಿಷ್ಯವನ್ನು ತಿದ್ದಿ ತೀರ್ಚುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಯುವ ಬಾಕ್ಸರ್ ಸಾಕ್ಷಿ ಚೌಧರಿ ಅವರ ಸಾಧನೆ.
ಕಷ್ಟದ ಕಾಲಕ್ಕೆ ಆಸರೆಯಾದ ‘ವಿರಾಟ್ ಕೊಹ್ಲಿ ಫೌಂಡೇಶನ್’
ತಮ್ಮ ಕ್ರೀಡಾ ಜೀವನದ ದಿನಗಳಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ಸೂಕ್ತ ತರಬೇತಿ ಸೌಲಭ್ಯಗಳಿಲ್ಲದೆ ಸಾಕ್ಷಿ ಚೌಧರಿ ಅವರು ಪರದಾಡುತ್ತಿದ್ದರು. ದೇಶಕ್ಕಾಗಿ ಪದಕ ಗೆಲ್ಲುವ ಕನಸು ಹೊತ್ತಿದ್ದ ಈ ಯುವತಿಯ ಕಷ್ಟದ ಸಮಯಕ್ಕೆ ನೆರವಾಗಿದ್ದು ವಿರಾಟ್ ಕೊಹ್ಲಿ ಅವರ ‘ವಿರಾಟ್ ಕೊಹ್ಲಿ ಫೌಂಡೇಶನ್’ (VKF).
ಸಾಕ್ಷಿ ಅವರ ಬಾಕ್ಸಿಂಗ್ ತರಬೇತಿಗೆ ಅಗತ್ಯವಿದ್ದ ಆಧುನಿಕ ಉಪಕರಣಗಳು, ಪೌಷ್ಟಿಕ ಆಹಾರ , ಪ್ರವಾಸ ವೆಚ್ಚ ಹಾಗೂ ಕ್ರೀಡಾ ಉಡುಪುಗಳ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಫೌಂಡೇಶನ್ ವಹಿಸಿಕೊಂಡಿತು. ಇದರಿಂದಾಗಿ ಆರ್ಥಿಕ ಚಿಂತೆಗಳಿಲ್ಲದೆ ಕೇವಲ ಆಟದ ಮೇಲಷ್ಟೇ ಗಮನ ಹರಿಸಿದ ಸಾಕ್ಷಿ, ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಪತಾಕೆಯನ್ನು ವಿದೇಶದ ನೆಲದಲ್ಲಿ ಹಾರಿಸಿದರು. “ತಮ್ಮ ಯಶಸ್ಸಿನ ಹಿಂದೆ ವಿರಾಟ್ ಕೊಹ್ಲಿ ಅವರ ಬೆಂಬಲದ ಹಸ್ತವಿದೆ” ಎಂದು ಸಾಕ್ಷಿ ಚೌಧರಿ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಮೈದಾನದಾಚೆಗಿನ ಕೊಹ್ಲಿ ಸಾಮಾಜಿಕ ಸಾಮ್ರಾಜ್ಯ: 2013ರಲ್ಲಿ ಸ್ಥಾಪನೆಯಾದ ‘ವಿರಾಟ್ ಕೊಹ್ಲಿ ಫೌಂಡೇಶನ್’ ಕೇವಲ ಕ್ರೀಡೆಗಷ್ಟೇ ಸೀಮಿತವಾಗದೆ ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ:
ಅಥ್ಲೀಟ್ ಅಭಿವೃದ್ಧಿ ಯೋಜನೆ: ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದ ನೂರಾರು ಯುವ ಪ್ರತಿಭೆಗಳನ್ನು ದತ್ತು ಪಡೆದು, ಅವರಿಗೆ ಅಂತರರಾಷ್ಟ್ರೀಯ ಮಟ್ಟದ ತರಬೇತಿ ವೆಚ್ಚವನ್ನು ಫೌಂಡೇಶನ್ ಭರಿಸುತ್ತಿದೆ.
ಶಿಕ್ಷಣ ಮತ್ತು ಅನಾಥ ಮಕ್ಕಳ ಆರೈಕೆ: ವಂಚಿತ ಮಕ್ಕಳಿಗೆ ಉತ್ತಮ ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ಒದಗಿಸುವ ಸಂಸ್ಥೆಗಳಿಗೆ ಆಸರೆಯಾಗಿದೆ.
ಆರೋಗ್ಯ ಮತ್ತು ತುರ್ತು ನೆರವು: ಕಷ್ಟದಲ್ಲಿರುವ ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕದಂತಹ ತುರ್ತು ಸಂದರ್ಭಗಳಲ್ಲಿ ಕೋಟಿಗಟ್ಟಲೆ ರೂಪಾಯಿ ಪರಿಹಾರ ನಿಧಿ ಸಂಗ್ರಹಿಸಿ ಸಮಾಜಕ್ಕೆ ಆಮ್ಲಜನಕ ಹಾಗೂ ಅಗತ್ಯ ಸಾಮಗ್ರಿಗಳನ್ನು ಪೂರೈಸಿತ್ತು.
ಪ್ರಾಣಿ ದಯೆ (Animal Welfare): ಬೀದಿ ನಾಯಿಗಳು ಹಾಗೂ ಗಾಯಗೊಂಡ ಪ್ರಾಣಿಗಳ ಆರೈಕೆಗಾಗಿ ಮುಂಬೈನಲ್ಲಿ ವಿಶೇಷ ಪ್ರಾಣಿ ಚಿಕಿತ್ಸಾಲಯ ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಕೊಹ್ಲಿ ಆರಂಭಿಸಿದ್ದಾರೆ.
ತಮ್ಮ ಯಶಸ್ಸು ಮತ್ತು ಗಳಿಕೆಯ ಒಂದು ಭಾಗವನ್ನು ಸಮಾಜದ ಏಳಿಗೆಗಾಗಿ ಬಳಸುತ್ತಿರುವ ವಿರಾಟ್ ಕೊಹ್ಲಿ, ‘ಕಣ ಕಣದಲ್ಲೂ ಸಹಕಾರದ ಮನೋಭಾವ’ ಮೆರೆಯುವ ಮೂಲಕ ಭಾರತದ ಕ್ರೀಡಾ ಜಗತ್ತಿಗೆ ನಿಜವಾದ ನಾಯಕನಾಗಿ ಮಾದರಿಯಾಗಿದ್ದಾರೆ.











