ಕೇರಳ ಸಮಾಜಮ್ ಉಡುಪಿ ವತಿಯಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಲಿತರ್ಪಣ ಕಾರ್ಯಕ್ರಮ- ಕಹಳೆ ನ್ಯೂಸ್

ಉಡುಪಿ: ಕೇರಳ ಸಮಾಜಮ್ ಉಡುಪಿ ವತಿಯಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಬುಧವಾರ ಕರ್ಕಿಡಕವಾವು ಬಲಿತರ್ಪಣ ಕಾರ್ಯಕ್ರಮ ನಡೆಯಿತು.
ಮಲಯಾಳಂ ತಿಂಗಳಾದ ಕರ್ಕಿಡಕಂನ ಅಮಾವಾಸ್ಯೆಯ ದಿನವನ್ನು ಕರ್ಕಿಡಕವಾವು ಎಂದು ಆಚರಿಸಲಾಗುತ್ತದೆ. ಈ ದಿನ ಅಗಲಿದ ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಸಂಪ್ರದಾಯ ಕೇರಳದಲ್ಲಿ ರೂಢಿಯಲ್ಲಿದೆ. ಕೇರಳದ ವಿವಿಧೆಡೆ ಸಾವಿರಾರು ಮಂದಿ ಈ ದಿನದಂದು ಪಿತೃಗಳಿಗೆ ಬಲಿತರ್ಪಣ ನೆರವೇರಿಸುತ್ತಾರೆ.
ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳದವರಿಗೆ ಕೇರಳಕ್ಕೆ ತೆರಳಿ ಬಲಿತರ್ಪಣ ನೆರವೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇರಳ ಸಮಾಜಮ್ ಕಳೆದ ಎರಡು ವರ್ಷಗಳಿಂದ ಮಲ್ಪೆ ಕಡಲ ತೀರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಕೊಯಿಕೋಡ್ ನಿಂದ ಆಗಮಿಸಿದ್ದ ಹಿರಿಯ ಪುರೋಹಿತರಾದ ಶ್ರೀ ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಭಾಗವಹಿಸಿದ್ದವರು ಅಗಲಿದ ಕುಟುಂಬ ಸದಸ್ಯರಿಗೆ ಪಿಂಡ ಪ್ರದಾನ ನೆರವೇರಿಸಿದರು. ನಂತರ ಸಮುದ್ರ ಸ್ನಾನ ಮಾಡಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಕೇರಳ ಸಮಾಜ ಬಾಂಧವರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಕೇರಳ ಸಮಾಜಂ ಉಡುಪಿ ರಿ ಇದರ ಅಧ್ಯಕ್ಷರಾದ ಶ್ರೀ ಅರುಣ್, ಕುಮಾರ್,ಕಾರ್ಯದರ್ಶಿ ಪ್ರಶಾಂತ್ ಕುಮಾರ್ ,ಕೋಶಾಧಿಕಾರಿ ರಮೇಶ್ ಈ ಪಿ ,ವಸಂತ್ ಕುಮಾರ್ ಪ್ರದೂಶ್ , ಉಪಸ್ಥಿತರಿದ್ದರು.











