Sunday, August 9, 2026
ಸುದ್ದಿ

ತ್ರಿಶಾ ಸಮೂಹ ಸಂಸ್ಥೆಯ ‘ತ್ರಿಶಾ @ 28’ ಸಂಭ್ರಮಾಚರಣೆ: ಆಗಸ್ಟ್ 10ರಂದು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ – ಕಹಳೆ ನ್ಯೂಸ್

ಶಿಕ್ಷಣ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಸಾರ್ಥಕ ಪಯಣ ಬೆಳೆಸಿರುವ ಪ್ರಮುಖ ಶಿಕ್ಷಣ ಸಂಸ್ಥೆ ‘ತ್ರಿಶಾ ಸಮೂಹ ಸಂಸ್ಥೆ’ ತನ್ನ “ತ್ರಿಶಾ @ 28” ಸಂಭ್ರಮಾಚರಣೆಯನ್ನು 2026ರ ಆಗಸ್ಟ್ 10ರ ಸೋಮವಾರದಂದು ಆಯೋಜಿಸಿದೆ. ಕಟಪಾಡಿಯ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯವರೆಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು

1998ರ ಆಗಸ್ಟ್ 10ರಂದು ಕೇವಲ ಐದು ವಿದ್ಯಾರ್ಥಿಗಳೊಂದಿಗೆ ಆರಂಭವಾದ ತ್ರಿಶಾ ಸಂಸ್ಥೆ, ಇಂದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ. ಕಳೆದ 28 ವರ್ಷಗಳಿಂದ ಗುಣಮಟ್ಟದ ಶಿಕ್ಷಣ, ಮೌಲ್ಯಾಧಾರಿತ ಬೋಧನೆ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಾ ಕರಾವಳಿ ಭಾಗದ ವಿಶ್ವಾಸಾರ್ಹ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಸಂಸ್ಥೆಯ 28ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಗುವುದು. ಕೆ. ಪಿ. ರಾವ್, ಮುಕುಂದ, ಸೂರಿ ಶೆಟ್ಟಿ ಕಾಪು, ‘ನಮ್ಮ ಮನೆ ನಮ್ಮ ಮರ’ ಅಭಿಯಾನದ ಅವಿನಾಶ್ ಕಾಮತ್, ಡಾ. ಪಿ. ವಿ. ಭಂಡಾರಿ, ಸತ್ಯೇಂದ್ರ ಪೈ, ರವಿ ಮಟ್ಟು, ಯಕ್ಷಗಾನ ಕಲಾಕೇಂದ್ರದ ಮುರಳಿ ಕಡೆಕಾರ್, ಹೋಂಗಾರ್ಡ್ ಪುಷ್ಪಾ ಹಾಗೂ ಸಂಪತ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಗೌರವ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.

ಮುಖ್ಯ ಅತಿಥಿಗಳು ಹಾಗೂ ಪ್ರಮುಖರು:
ಕಾರ್ಯಕ್ರಮದಲ್ಲಿ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಸುಧೀರ್ ಎಂ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ.ಎ. ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಭ್ರಮಾಚರಣೆಯ ಭಾಗವಾಗಿ ಸಂಸ್ಥೆಯ 28 ವರ್ಷಗಳ ಯಶೋಗಾಥೆಯನ್ನು ಬಿಂಬಿಸುವ ವಿಶೇಷ ಪ್ರಸ್ತುತಿ, ಶುಭಾಶಯ ಸಂದೇಶಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಸುದ್ದಿಗೋಷ್ಠಿಯಲ್ಲಿ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್, ಕನ್ನಡ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಹಾಗೂ ಅಕಾಡೆಮಿಕ್ ಮ್ಯಾನೇಜರ್ ಡಾ. ಶಾಂತಪ್ರಿಯ ಉಪಸ್ಥಿತರಿದ್ದರು.

ಈ ಅಭೂತಪೂರ್ವ ಸಂಭ್ರಮಾಚರಣೆಯಲ್ಲಿ ಶಿಕ್ಷಣತಜ್ಞರು, ಗಣ್ಯರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತ್ರಿಶಾ ಸಮೂಹ ಸಂಸ್ಥೆಯು ಪ್ರಕಟಣೆಯಲ್ಲಿ ವಿನಂತಿಸಿದೆ.