ಎನ್ನೆಂಸಿ ನೇಚರ್ ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ : ಯುವಜನರಲ್ಲಿ ಪ್ರಕೃತಿ ಪ್ರೇಮ ಮತ್ತು ಪರಿಸರ ಜಾಗೃತಿ ಅತ್ಯಗತ್ಯ: ಗೋಪಾಲಕೃಷ್ಣ ಬಿ ಕೆ – ಕಹಳೆ ನ್ಯೂಸ್*

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ಇದರ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜುಲೈ 31ನೇ ಶುಕ್ರವಾರದಂದು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು.
ಮರದ ಕಾಂಡಕ್ಕೆ ಎಲೆಗಳನ್ನು ಬಿಡಿಸುವ ಭಿತ್ತಿಚಿತ್ರವನ್ನು ಅನಾವರಣಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಸುಳ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂತೋಡು ಇಲ್ಲಿನ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ ಬನ ಇವರು ಇಂದಿನ ಪರಿಸರ ಸವಾಲುಗಳನ್ನು ಎದುರಿಸಲು ಯುವಜನರಲ್ಲಿ ಪ್ರಕೃತಿ ಪ್ರೇಮ ಮತ್ತು ಪರಿಸರ ಜಾಗೃತಿ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತರಾಗದೆ, ಪರಿಸರದ ಬಗ್ಗೆ ಕಾಳಜಿ ಹೊಂದಿದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು. ಪ್ರಕೃತಿ ಕ್ಲಬ್‌ನ ವಿವಿಧ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕ ಹೊಣೆಗಾರಿಕೆ ಹಾಗೂ ಪರಿಸರ ಪ್ರಜ್ಞೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ, ಪ್ರಕೃತಿ ಕ್ಲಬ್‌ನಂತಹ ವೇದಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿವೆ. ಕಾಲೇಜಿನಲ್ಲಿ ನಡೆಯುವ ಪರಿಸರ ಸಂಬಂಧಿತ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಮಮತಾ ಕೆ., ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಜೀವವೈವಿಧ್ಯ ಅಧ್ಯಯನ, ತ್ಯಾಜ್ಯ ನಿರ್ವಹಣೆ ಹಾಗೂ ಹಸಿರು ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಮಾತನಾಡಿ, ನೇಚರ್ ಕ್ಲಬ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಕಾರ್ಯಕ್ರಮದ ತಯಾರಿ ಶ್ಲಾಘನೀಯ ಎಂದು ನೇಚರ್ ಕ್ಲಬ್ ನ ಮುಂದಿನ ಕಾರ್ಯ ಚಟುವಟಿಕೆಗಳ ಯಶಸ್ಸಿಗೆ ಶುಭ ಹಾರೈಸಿದರು.
ನೇಚರ್ ಕ್ಲಬ್ ಸದಸ್ಯೆ ಕು. ಪ್ರಾರ್ಥನಾ ಪ್ರಾರ್ಥಿಸಿ, ಅಂತಿಮ ಜೀವ ವಿಜ್ಞಾನ ಪದವಿಯ ತನುಷ್ ಜಿ ಕೆ ಸ್ವಾಗತಿಸಿದರು. ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ, ಕ್ಲಬ್ ನ ಕಾರ್ಯದರ್ಶಿ ಕು. ಶ್ವೇತಾ ವಾರ್ಷಿಕ ವರದಿಯನ್ನು, ಮುಂದಿನ ಕಾರ್ಯ ಯೋಜನೆಗಳ ಪಟ್ಟಿಯನ್ನು ವಾಚಿಸಿದರು. ನೇಚರ್ ಕ್ಲಬ್ ಸದಸ್ಯರಾದ ಕು. ಧನ್ಯಶ್ರೀ ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಜೊತೆ ಕಾರ್ಯದರ್ಶಿ ಕು. ಪ್ರತೀಕ್ಷಾ ವಂದಿಸಿದರು. ತೃತೀಯ ಜೀವವಿಜ್ಞಾನ ಪದವಿಯ ಕು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಜೀವ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಕೃತಿಕಾ, ಜಿತೇಶ್, ಭಾವನಾ, ಶನ್ವಿತಾ ಮತ್ತು ಅಕ್ಷತಾ ಹಾಗೂ ಲ್ಯಾಬ್ ಸಹಾಯಕ ಸಿಬ್ಬಂದಿಗಳಾದ ಜಯಂತಿ, ಭವ್ಯ, ಗೀತಾ, ಶಿವಾನಂದ ಹಾಗೂ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.











