ನೂತನ ಎಸ್.ವಿ.ಎಸ್. ಟೇಬಲ್ ಟೆನ್ನಿಸ್ ಅಂಕಣ ಉದ್ಘಾಟನೆ ಹಾಗೂ ಉಡುಪಿ ತಾಲೂಕು ಮಟ್ಟದ ಪಂದ್ಯಾವಳಿಗೆ ಚಾಲನೆ – ಕಹಳೆ ನ್ಯೂಸ್

ಕಟಪಾಡಿ: ಇಲ್ಲಿನ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ (ರಿ.) ಕಟಪಾಡಿ ಇದರ ವತಿಯಿಂದ ನೂತನ ಎಸ್.ವಿ.ಎಸ್. ಟೇಬಲ್ ಟೆನ್ನಿಸ್ ಅಂಕಣದ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ ಮತ್ತು ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕಟಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ 14 ಮತ್ತು 17 ವರ್ಷದೊಳಗಿನ ವಿದ್ಯಾರ್ಥಿಗಳ ಉಡುಪಿ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟವು ಎಸ್.ವಿ.ಎಸ್. ಪ.ಪೂ. ಕಾಲೇಜಿನ ಸಭಾಭವನದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಡಾ. ಎಲ್ಲಮ್ಮ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಆರೋಗ್ಯ, ಆನಂದ ಮತ್ತು ಆದ್ಯತೆಗೆ ಕ್ರೀಡೆಯು ಅತ್ಯಂತ ಉಪಯುಕ್ತವಾಗಿದೆ. ಕ್ರೀಡಾಸಕ್ತ ಹಾಗೂ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರವು ಸೂಕ್ತ ವೇದಿಕೆ ಮತ್ತು ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲವಾಗಿ ನಿರ್ಮಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಸಂಚಾಲಕರಾದ ಸತ್ಯೇಂದ್ರ ಪೈ ಅವರು ಮಾತನಾಡಿ, “ನಮ್ಮ ವಿದ್ಯಾರ್ಥಿಗಳಿಗೆ ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಲು ಮುಂದಾಗಬೇಕು. ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸಂಸ್ಥೆಯ ಕಡೆಯಿಂದ ಏನೇ ಸಹಕಾರ ಬೇಕಿದ್ದರೂ ನೀಡಲು ನಾವು ಸದಾ ಸಿದ್ಧ,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ತ್ರಿಶಾ ಕಾಲೇಜಿನ ಚೇರ್‌ಮ್ಯಾನ್ ಸಿ.ಎ. ಗೋಪಾಲಕೃಷ್ಣ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಾ ಪೂಜಾರಿ, ಟಿ.ಪಿ.ಇ.ಓ. ರವೀಂದ್ರ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮಕುಮಾರ್, ವರದನಾಯಕ, ಕ.ರಾ.ದೈ.ಶಿ.ಶಿ. ಸಂಘದ ಅಧ್ಯಕ್ಷ ಕಿರಣ್ ಶೆಟ್ಟಿ, ಪ್ರಾಂಶುಪಾಲರಾದ ಡಾ. ದಯಾನಂದ ಪೈ, ಆಡಳಿತ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿ ಹಾಗೂ ಹೆಚ್.ಎಮ್. ಸುಜಾ ಡಿಸೋಜ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಶಿಕ್ಷಕ ವಿವೇಕಾನಂದ ಅವರು ಎಲ್ಲರನ್ನೂ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಸಂತ ಜೋಗಿ ಕಾರ್ಯಕ್ರಮ ನಿರೂಪಿಸಿದರೆ, ಕಿರಣ್ ಶೆಟ್ಟಿ ವಂದನಾರ್ಪಣೆ ಗೈದರು.











