
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ತಣ್ಣಗಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ತನ್ನ ಪ್ರಮುಖ ಶಾಸನಾತ್ಮಕ ಆದ್ಯತೆಗಳತ್ತ ಗಮನಹರಿಸುತ್ತಿದೆ.
ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಹೌದು. ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆ ಹಿಂಪಡೆದುಕೊಂಡಿದೆ. ಇದಾದ ಒಂದು ದಿನದ ನಂತರ, ಪ್ರಧಾನಿ ಮೋದಿ ಅವರು ಇನ್ಫೋಸಿಸ್ ಸಹ-ಸ್ಥಾಪಕ, ವಿಶ್ವಪ್ರಸಿದ್ಧ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರೀಕ್ಷಾ ಸುಧಾರಣಾ ಕಾರ್ಯಪಡೆ ರಚಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಪೇಪರ್ ಲೀಕ್ ವಿರುದ್ಧದ ಕಾನೂನನ್ನ ಮತ್ತಷ್ಟು ಬಲಪಡಿಸುವ ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ವರದಿಗಳ ಪ್ರಕಾರ, ನೀಟ್ ಪ್ರಶ್ನೆಪತ್ರಿಕೆ ವಿವಾದದ ತಣ್ಣಗಾದ ಬೆನ್ನಲ್ಲೇ ಸಾರ್ವಜನಿಕ ಪರೀಕ್ಷೆ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಸೋಮವಾರ ಲೋಕಸಭೆಯಲ್ಲಿ ಇಂದಿನ ಅಧಿವೇಶನದಲ್ಲಿ ಮಂಡಿಸಲು ಸಕಲ ತಯಾರಿ ನಡೆದಿದೆ. ಇದರೊಂದಿಗೆ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತರುವುದು ಹಾಗೂ ರಾಜಕೀಯವಾಗಿ ಸೂಕ್ಷ್ಮವಾದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಂತಹ ಬಾಕಿ ಉಳಿದಿರುವ ಸಾಂವಿಧಾನಿಕ ಕಾರ್ಯಸೂಚಿಗಳತ್ತ ಸರ್ಕಾರ ಗಮನ ಹರಿಸಲು ಉದ್ದೇಶಿಸಿದೆ. ಈ ಎರಡೂ ವಿಷಯಗಳಿಗೆ ಸಂವಿಧಾನ ತಿದ್ದುಪಡಿ ತರಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ಳುತ್ತಿದೆ.











