ಬೆಳ್ತಂಗಡಿ: ಆಂಬುಲೆನ್ಸ್‌ನಲ್ಲಿ ಡ್ರಗ್ಸ್ ದಂಧೆ ಆರೋಪ : ₹5.5 ಕೋಟಿ ಮೌಲ್ಯದ MDMA ಪ್ರಕರಣದ ನಾಲ್ಕನೇ ಆರೋಪಿ ಜಲೀಲ್ ಪರಾರಿ – ಕಹಳೆ ನ್ಯೂಸ್

ಬೆಳ್ತಂಗಡಿ : ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಸುಮಾರು ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ (42) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಮಂಗಳೂರು ನಗರ ಸಿಸಿಬಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಜಲೀಲ್ @ ಬಾಬಾ ಎಂಬಾತ ಪ್ರಮುಖ ಆರೋಪಿಗಳಿಂದ ಮಾದಕ ವಸ್ತು ಪಡೆದು ತನ್ನ ಆಂಬುಲೆನ್ಸ್ ಮೂಲಕ ಜಿಲ್ಲೆಯ ವಿವಿಧೆಡೆ ಯುವಕರು, ವಿದ್ಯಾರ್ಥಿಗಳು ಹಾಗೂ ಇತರರಿಗೆ ಪೂರೈಕೆ ಮಾಡುತ್ತಿದ್ದಾನೆ ಎಂಬ ಆರೋಪ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂನ್ 25ರಂದು ಮಂಗಳೂರು ನಗರದ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಣ್ಣಪ್ಪಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ದೊರೆತ ಮಾಹಿತಿಯ ಆಧಾರದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ಜುಲೈ 15ರಂದು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು.
ಬಂಧಿತರಿಂದ ಒಟ್ಟು 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಮಾದಕ ವಸ್ತುವಿನ ಅಂದಾಜು ಮೌಲ್ಯ ₹5.5 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.











