
ಪಿ.ವಿ. ಸಿಂಧುಗೆ ಐತಿಹಾಸಿಕ ಜಪಾನ್ ಓಪನ್ ಮುಕುಟ:
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ತನ್ನ ದೇಶ ಭಾರತ ಕ್ಕೆ ಗೌರವ ತಂದಿದ್ದಾರೆ. ಟೋಕಿಯೋದಲ್ಲಿ ನಡೆದ ಪ್ರತಿಷ್ಠಿತ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ಪ್ರಬಲ ಆಟಗಾರ್ತಿ ಅಕೇನ್ ಯಮಾಗುಚಿ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ, ಇತಿಹಾಸ ಸೃಷ್ಟಿಸಿದ್ದಾರೆ.
ಈ ಗೆಲುವಿನೊಂದಿಗೆ ಜಪಾನ್ ಓಪನ್ ಇತಿಹಾಸದಲ್ಲೇ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ 31 ವರ್ಷದ ಸಿಂಧು ಪಾತ್ರರಾಗಿದ್ದಾರೆ.
ಸ್ಥಳೀಯ ಅಭಿಮಾನಿಗಳ ಭಾರಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಮೂರು ಬಾರಿಯ ವಿಶ್ವ ಚಾಂಪಿಯನ್ ಅಕೇನ್ ಯಮಾಗುಚಿ ಯವರನ್ನು ಸಿಂಧು 21-17, 21-17 ರ ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿದರು.
ಪಂದ್ಯದ ಕೊನೆಯಲ್ಲಿ ಯಮಾಗುಚಿ ಬಾರಿಸಿದ ಶಟಲ್ ಲೈನ್ ದಾಟಿ ಹೊರಬೀಳುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.
2 ವರ್ಷಗಳ ಪ್ರಶಸ್ತಿ ಬರಕ್ಕೆ ಮುಕ್ತಿ: 2024 ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯ ನಂತರ ಸಿಂಧು ಅವರ ಕೈಸೇರಿದ ಮೊದಲ ಬಿಡಬ್ಲ್ಯೂಎಫ್ (BWF) ವರ್ಲ್ಡ್ ಟೂರ್ ಪ್ರಶಸ್ತಿ ಇದಾಗಿದೆ.
ಮೊದಲ ಸೂಪರ್ 750 ಪ್ರಶಸ್ತಿ: ಪಿ.ವಿ. ಸಿಂಧು ಅವರ ವೃತ್ತಿಜೀವನದ ಮೊದಲ ಬಿಡಬ್ಲ್ಯೂಎಫ್ ಸೂಪರ್ 750 (Super 750) ಸರಣಿಯ ಪ್ರಶಸ್ತಿ ಇದಾಗಿದೆ.
ವಿಶ್ವ ಚಾಂಪಿಯನ್‌ಶಿಪ್‌ಗೆ ಬೂಸ್ಟರ್: ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಮುನ್ನ ಈ ಗೆಲುವು ಸಿಂಧು ಅವರ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ.
ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಸಿಂಧು
”ಈ ಗೆಲುವು ನನ್ನ ಪಾಲಿಗೆ ಅತ್ಯಂತ ಮುಖ್ಯವಾಗಿತ್ತು. ಪಂದ್ಯ ಗೆದ್ದ ತಕ್ಷಣ ನನ್ನ ಕಣ್ಣಿನಲ್ಲಿ ನೀರು ಬಂದಿತು. ಕಳೆದ ಕೆಲವು ದಿನಗಳಿಂದ ಅನೇಕರು ನನ್ನ ಫಾರ್ಮ್ ಬಗ್ಗೆ ಪ್ರಶ್ನೆ ಎತ್ತುತ್ತಿದ್ದರು, ನನ್ನ ಆಟ ಮುಗಿಯಿತು ಅಂದುಕೊಂಡಿದ್ದರು. ಆದರೆ ನಾನು ನನ್ನ ಮೇಲೆ, ನನ್ನ ಕೋಚ್ ಹಾಗೂ ಕುಟುಂಬದ ಮೇಲೆ ನಂಬಿಕೆ ಇಟ್ಟಿದ್ದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ” ಎಂದು ಸಿಂಧು ಭಾವುಕರಾಗಿ ನುಡಿದರು.ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಶ್ಲಾಘನೆ
ಪಿ.ವಿ. ಸಿಂಧು ಅವರ ಈ ಐತಿಹಾಸಿಕ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಸಾಧನೆ. ಸಿಂಧು ಅವರ ಧೃಡ ಸಂಕಲ್ಪ ಮತ್ತು ಅದ್ಭುತ ಕೌಶಲ್ಯ ಇಡೀ ಟೂರ್ನಿಯಲ್ಲಿ ಎದ್ದು ಕಾಣುತ್ತಿತ್ತು. ಈ ಪ್ರಶಸ್ತಿ ದೇಶದ ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ” ಎಂದು ಎಕ್ಸ್ (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.











