Tuesday, September 1, 2026
ಸುದ್ದಿ

ತಲ್ಲೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಕುಂದುಕೊರತೆ ಸಭೆ : ಗಾಂಜಾ ಹಾವಳಿ ನಿಯಂತ್ರಣ, ಜನಸೇವೆಗೆ ಒತ್ತು- ಕಹಳೆ ನ್ಯೂಸ್

ತಲ್ಲೂರು, ಕುಂದಾಪುರ: ಕುಂದಾಪುರ ಪೊಲೀಸ್ ಠಾಣೆಯ ವತಿಯಿಂದ ಪರಿಶಿಷ್ಟ ಜಾತಿ/ಪಂಗಡದ ಮಾಸಿಕ ಕುಂದುಕೊರತೆ ಸಭೆಯನ್ನು ತಲ್ಲೂರು ಗ್ರಾಮದ ಕೋಟೆಬಾಗಿಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಠಾಣಾಧಿಕಾರಿ ನಂಜನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಜಾಹೀರಾತು

ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹಲವು ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಮದಲ್ಲಿ ಹೆಚ್ಚುತ್ತಿರುವ ಗಾಂಜಾ ಹಾವಳಿಗೆ ತಕ್ಷಣ ಕಡಿವಾಣ ಹಾಕುವಂತೆ ವಿಜೇಂದ್ರ ಆಗ್ರಹಿಸಿದ್ದು, ಚೇತನ್ ಸೇರಿದಂತೆ ಹಲವರು ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದಲಿತ ಮುಖಂಡ ಚಂದ್ರಮ ತಲ್ಲೂರು ಮಾತನಾಡಿ, ಗ್ರಾಮ ಪಂಚಾಯತ್‌ನ ಸರ್ಕಾರಿ ಹೌಸ್‌ಸೈಟ್‌ನಲ್ಲಿ ಮನೆ ನಿರ್ಮಿಸಿಕೊಂಡಿರುವ ಮಹಾಬಲ ಅವರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜೊತೆಗೆ, ತಲ್ಲೂರು ಗ್ರಾಮದ ದಲಿತರಿಗೆ ಚಾಲನಾ ಪರವಾನಗಿ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಇಲಾಖೆಯ ಸಂಯುಕ್ತ ಶಿಬಿರವನ್ನು ಗ್ರಾಮದಲ್ಲಿಯೇ ಆಯೋಜಿಸಬೇಕು ಎಂದು ಮನವಿ ಮಾಡಿದರು.

ಉಮೇಶ್ ಎಸ್.ಕೆ. ಅವರು ಬೀಟ್ ಪೊಲೀಸ್ ಸಿಬ್ಬಂದಿ ಗ್ರಾಮಸ್ಥರಿಗೆ ಅಗತ್ಯ ಸಮಯದಲ್ಲಿ ಲಭ್ಯರಾಗುವಂತೆ ಕ್ರಮ ಕೈಗೊಳ್ಳುವಂತೆ ಕೋರಿದರು. ಕಾಲೇಜು ವಿದ್ಯಾರ್ಥಿ ಗೌತಮ್ ತಲ್ಲೂರು, ದೊಡ್ಡಮನೆ ಸಮೀಪ ಪಾಚಿ ಕಟ್ಟಿರುವ ಕಾಂಕ್ರೀಟ್ ರಸ್ತೆಯಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಜಾರಿ ಬೀಳುತ್ತಿರುವ ಅಪಾಯದ ಬಗ್ಗೆ ಸಂಬಂಧಪಟ್ಟ ಇಲಾಖೆ ತುರ್ತು ಗಮನ ಹರಿಸಬೇಕೆಂದು ಮನವಿ ಸಲ್ಲಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ ನಂಜನಾಯ್ಕ, ಪರಿಶಿಷ್ಟ ಜಾತಿ/ಪಂಗಡದವರ ಕಾನೂನುಬದ್ಧ ಹಕ್ಕುಗಳು ಹಾಗೂ ರಕ್ಷಣಾ ಕ್ರಮಗಳ ಕುರಿತು ವಿವರಿಸಿದರು. ಯಾವುದೇ ಸಮಸ್ಯೆ ಎದುರಾದಾಗ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಹಾಗೂ ಪೊಲೀಸ್ ಸಹಾಯವಾಣಿಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಾ ಘರ್ಜನೆ) ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಮಾತನಾಡಿ, ಗ್ರಾಮಸ್ಥರು ಯಾವುದೇ ಸಮಸ್ಯೆಯನ್ನು ನೇರವಾಗಿ ಠಾಣಾಧಿಕಾರಿಗಳ ಗಮನಕ್ಕೆ ತರಬೇಕು. ಹೊರಗಿನಿಂದ ಬರುವವರು ಅಹಿತಕರ ಚಟುವಟಿಕೆಗಳಲ್ಲಿ ತೊಡಗುವ ಮುನ್ನವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಎಸ್‌ಐ ವಿಲ್ಫ್ರೆಡ್ ಡಿಸೋಜ, ಎಎಸ್‌ಐ ರಾಜು ಬೋವಿ, ಪೊಲೀಸ್ ಸಿಬ್ಬಂದಿ ಚಂದ್ರ ಶೆಟ್ಟಿ, ಪ್ರವೀಣ್ ನೇಜಾ,ಹೆಡ್ ಕಾನ್ಸ್ಟೆಬಲ್ ಗಿರೀಶ್, ಜೈ ಕರ್ನಾಟಕ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುದೀರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಕ್ಷಯ್ ಹಾಗೂ ಗ್ರಾಮಸ್ಥರಾದ ಜ್ಯೋತಿ ಟೀಚರ್, ಅಮೀನ, ಬಾಬಿ, ಪ್ರಕಾಶ್, ರಮೇಶ್, ಮಂಜು, ರಂಜೀತ್, ಬಾಲಚಂದ್ರ, ನಿತೀನ್, ಯೋಗೀಶ್, ಮುನ್ನ, ಗಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್ ಇಲಾಖೆ ಸ್ಪಂದಿಸುವ ಭರವಸೆ ನೀಡಿದರೆ, ಗ್ರಾಮಸ್ಥರು ಪೊಲೀಸ್ ಇಲಾಖೆಯೊಂದಿಗೆ ಸಹಕಾರದಿಂದ ಸಮಾಜದ ಶಾಂತಿ, ಸುರಕ್ಷತೆ ಹಾಗೂ ಅಭಿವೃದ್ಧಿಗೆ ಕೈಜೋಡಿಸುವ ಸಂಕಲ್ಪ ವ್ಯಕ್ತಪಡಿಸಿದರು.