Tuesday, July 14, 2026
ಸುದ್ದಿ

ಬದರಿನಾಥ್ ದೇಣಿಗೆ ಕಳವು: ಪ್ರಮುಖ ಆರೋಪಿ ಡೆಹ್ರಾಡೂನ್‌ನಲ್ಲಿ ಅರೆಸ್ಟ್- ಕಹಳೆ ನ್ಯೂಸ್

ಡೆಹ್ರಾಡೂನ್: ಬದರಿನಾಥ್ ದೇಣಿಗೆ ಕಳವು ಪ್ರಕರಣದ ಪ್ರಮುಖ ಆರೋಪಿಯನ್ನು ವಿಶೇಷ ತನಿಖಾ ತಂಡ ಡೆಹ್ರಾಡೂನ್‌ನಲ್ಲಿ  ಬಂಧಿಸಿದೆ.

ಪ್ರಮುಖ ಆರೋಪಿ ಪ್ರಮೋದ್ ನೌಟಿಯಾಲ್‌ನನ್ನು ಬಂಧಿಸಲಾಗಿದ್ದು, ಈತ ಬದರಿನಾಥ್ ದೇಗುಲದಲ್ಲಿ ಕಾಣಿಕೆ ಮತ್ತು ದೇಣಿಗೆಯ ಉಸ್ತುವಾರಿ ಅಧಿಕಾರಿಯಾಗಿದ್ದನು ಎನ್ನಲಾಗಿದೆ. ಉತ್ತರಾಖಂಡ ಸರ್ಕಾರ ತನಿಖೆಗೆ ಸಮಿತಿ ರಚಿಸಿದ ಬಳಿಕ ವಿಶೇಷ ತನಿಖಾ ತಂಡವು ಆರೋಪಿಯನ್ನು ಬಂಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜುಲೈ 8ರಂದು ಬದರಿನಾಥ ಪೊಲೀಸ್ ಠಾಣೆಯಲ್ಲಿ ಬದರಿನಾಥ-ಕೇದಾರನಾಥ ದೇವಸ್ಥಾನದ ಸಮಿತಿ ಸದಸ್ಯರಾದ ಯುಧ್ವೀರ್ ಫರ್ಸ್ವಾನ್ ಎಂಬುವವರು ದೂರು ನೀಡಿದ್ದರು. ದೂರಿನಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ಕಳ್ಳತನ ಮಾಡಿರುವುದಾಗಿ ಉಲ್ಲೇಖಿಸಿದ್ದರು. ದೂರಿನನ್ವಯ ಚಮೋಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬದರಿನಾಥ ದೇವಸ್ಥಾನದ ಕಾಣಿಕೆ ಕಳ್ಳತನ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿ ಮಹಾದೇವ್ ಉನಿಯಾಲ್ ಅವರಿಗೆ ವಹಿಸಲಾಗಿದ್ದು, ಅವರು ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಪ್ರಮೋದ್ ನೌಟಿಯಾಲ್ ಕಾಣಿಕೆ ಕದಿಯುತ್ತಿರುವುದು ಪತ್ತೆಯಾಗಿದೆ. ಈ ಸಾಕ್ಷ್ಯಾಧಾರಗಳ ಮೇರೆಗೆ ವಿಶೇಷ ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ. ಬಂಧನದ ವೇಳೆ ಆತನಿಂದ ಒಂದು ಸಾಲಿಗ್ರಾಮ ಶಿಲೆ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಆದರೆ ಯಾವುದೇ ಹಣ ಪತ್ತೆಯಾಗಿಲ್ಲ. ವಿಚಾರಣೆ ವೇಳೆಯೂ ಆತ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಸಿಂಗ್ ಪನ್ವಾರ್ ಅವರು ಮಾಹಿತಿ ನೀಡಿದ್ದು, ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಬಳಿಕ ಅವರನ್ನು ಗೋಪೇಶ್ವರದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ವಿಚಾರಣೆ ವೇಳೆ, ಕದ್ದ ಹಣ ಎಲ್ಲಿದೆ ಎಂದು ಪತ್ತೆಹಚ್ಚಲು ಮತ್ತು ಈ ಹಗರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ? ಎಂದು ತನಿಖೆ ನಡೆಸಲು ಪೊಲೀಸರು ಆರೋಪಿಯನ್ನು ತಮ್ಮ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಲಿದ್ದಾರೆ.