Tuesday, July 14, 2026
ಜಿಲ್ಲೆದೆಹಲಿರಾಜ್ಯಸುದ್ದಿ

ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧ ವಿವಾದ; ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ -ಕಹಳೆ ನ್ಯೂಸ್

ನವದೆಹಲಿ: ಬಕ್ರೀದ್ ಸೇರಿದಂತೆ ಯಾವುದೇ ದಿನ ತಮಿಳುನಾಡಿನಾದ್ಯಂತ ಹಸು ಮತ್ತು ಕರುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್   ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯಕ್ಕೆ ತಾತ್ಕಾಲಿಕ ಪರಿಹಾರ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಹೈಕೋರ್ಟ್ ಆದೇಶದ ಕೊನೆಯ ಭಾಗಕ್ಕೆ ತಿದ್ದುಪಡಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ರಾಜ್ಯ ಸರ್ಕಾರದ ವಿಶೇಷ ಅನುಮತಿ ಅರ್ಜಿಗೆ (SLP) ನೋಟಿಸ್ ಜಾರಿಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡು ಸರ್ಕಾರ, ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ-1958ಗೆ ವಿರುದ್ಧವಾಗಿದೆ ಎಂದು ವಾದಿಸಿತ್ತು. ಆದರೆ ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿಗೆ ಯೋಗ್ಯವಲ್ಲದ 10 ವರ್ಷ ಮೇಲ್ಪಟ್ಟ ಹಸುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯೊಂದಿಗೆ ವಧೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಇದಲ್ಲದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ-1960, ಕಸಾಯಿಖಾನೆ ನಿಯಮಗಳು-2001, ಹಾಗೂ ಇತರೆ ಕಾನೂನುಗಳು ಪ್ರಾಣಿಗಳ ವಧೆಗೆ ಷರತ್ತುಗಳನ್ನು ವಿಧಿಸುತ್ತವೆ. ಆದರೆ ಸಂಪೂರ್ಣ ನಿಷೇಧವನ್ನು ಎಲ್ಲಿಯೂ ಹೇಳಿಲ್ಲ ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ.

ಈ ಪ್ರಕರಣ ವಿಚಾರಣೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಗೋಹತ್ಯೆ ತಡೆಯುವಂತೆ ಮನವಿ ಮಾಡಲಾಗಿದ್ದರೂ, ಮದ್ರಾಸ್ ಹೈಕೋರ್ಟ್ ಬಕ್ರೀದ್ ಅಥವಾ ಯಾವುದೇ ದಿನ ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆದೇಶ ನೀಡಿತ್ತು.

ಅರ್ಜಿಯಲ್ಲಿ ಕೋರಿದ್ದಕ್ಕಿಂತ ಹೆಚ್ಚಿನ ವ್ಯಾಪ್ತಿಯಲ್ಲಿ ಹೈಕೋರ್ಟ್ ಆದೇಶ ನೀಡಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಗೋಹತ್ಯೆ ತಡೆಯುವ ವಿಚಾರಕ್ಕೆ ಸೀಮಿತವಾಗಿದ್ದ ಅರ್ಜಿಯಲ್ಲಿ, ಗೊತ್ತುಪಡಿಸಿದ ಕಸಾಯಿಖಾನೆಗಳಲ್ಲಿಯೂ ಸಂಪೂರ್ಣ ನಿಷೇಧ ವಿಧಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಸರ್ಕಾರ ವಾದಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ತಮಿಳುನಾಡು ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.