ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು ಮತ್ತು ಕುರುಡಾಯಿಕೆರೆ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ 847ನೇ ‘ನಮ್ಮೂರು ನಮ್ಮ ಕೆರೆ ದಂಡೆ ಗಿಡ ನಾಟಿ ಅಭಿಯಾನ- ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕಾಪು ತಾಲೂಕು ಮತ್ತು ಕೆರೆ ಅಭಿವೃದ್ಧಿ ಸಮಿತಿ, ಕುರುಡಾಯಿಕೆರೆ ಇವರ ಜಂಟಿ ಆಶ್ರಯದಲ್ಲಿ 847ನೇ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದ ಅಂಗವಾಗಿ ಕೆರೆ ಅಂಗಳದಲ್ಲಿ ಹಸಿರು ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾಪು ತಾಲೂಕು ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಯವರು, “ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರು ಸಮಾಜದ ನಿಜವಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಕೆರೆಗಳ ಪುನಶ್ಚೇತನ ಹಾಗೂ ಕೋಟ್ಯಂತರ ಮರ-ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಕಾರಣರಾಗಿದ್ದಾರೆ. ಇಡೀ ಕರ್ನಾಟಕದಾದ್ಯಂತ ಪ್ರತಿಯೊಬ್ಬರೂ ಪರಿಸರ ಜಾಗೃತಿ ಬೆಳೆಸಿಕೊಂಡು ಇಂತಹ ಸತ್ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎನ್ನುವ ಪೂಜ್ಯರ ಚಿಂತನೆ ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಹಸಿರು ಅಭಿಯಾನವು ನಿರಂತರವಾಗಿ ಸಾಗಲಿದ್ದು, ಸಾರ್ವಜನಿಕರು ತಮ್ಮ ಭಾಗದಲ್ಲಿ ಕೆರೆ ಅಭಿವೃದ್ಧಿ ಅಥವಾ ಹಸಿರು ಜಾಗೃತಿಯ ಕೆಲಸಗಳನ್ನು ಮಾಡಲು ಶ್ರೀ ಕ್ಷೇತ್ರದ ತಾಲೂಕು ಗ್ರಾಮಾಭಿವೃದ್ಧಿ ಯೋಜನೆಯನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳಬೇಕು,” ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಶ್ರೀ ಕ್ಷೇತ್ರದ ವಿವಿಧ ಜನಪರ ಯೋಜನೆಗಳು ಮತ್ತು ಪರಿಸರ ಕಾಳಜಿಯ ಚಿಂತನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಬಳಿಕ ಕೆರೆಯ ಅಂಗಳದಲ್ಲಿ ವಿವಿಧ ತಳಿಯ ಹಣ್ಣಿನ ಗಿಡಗಳು ಹಾಗೂ ಅರಣ್ಯ ಗಿಡಗಳನ್ನು ಗಣ್ಯರ ಸಮ್ಮುಖದಲ್ಲಿ ನಾಟಿ ಮಾಡಲಾಯಿತು.
ಈ ಮಹತ್ವದ ಹಸಿರು ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಸದಸ್ಯರಾದ ಸ್ಯಾಮ್ಸನ್, ರಮೇಶ್, ವಲೇರಿಯನ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಸರಿತಾ, ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಕೃಷಿ ಮೇಲ್ವಿಚಾರಕರಾದ ದೇವೇಂದ್ರ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಕ್ಯಾಪ್ಟನ್ ರಾಜು ಬೆಳ್ಳೆ, ಸೇವಾ ಪ್ರತಿನಿಧಿಗಳಾದ ಲಕ್ಷ್ಮಿ, ಪದ್ಮ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










