ಕೇತನ್ ಜೊತೆ ಎಂಗೆಜ್‌ಮೆಂಟ್, ಲವ್ವರ್ ಜೊತೆ ರಹಸ್ಯ ಮದುವೆ – ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್ ಬ್ಯೂಟಿ ಸಿಯಾ ಪುರಾಣ – ಕಹಳೆ ನ್ಯೂಸ್

ಮುಂಬೈ: ಭಾವಿ ಪತಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಸಿಯಾ ಗೋಯಲ್ (Siya) ಹಾಗೂ ಚೇತನ್ ಚೌಧರಿ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸಿಯಾ ಮತ್ತು ಚೇತನ್ ನಾಲ್ಕು ತಿಂಗಳ ಹಿಂದೆ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ರಹಸ್ಯವಾಗಿ ವಿವಾಹವಾಗಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪುಣೆ ಗ್ರಾಮೀಣ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಗೋಯಲ್ ಅವರ ಇಬ್ಬರು ಕಾಲೇಜು ಸ್ನೇಹಿತರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಫೋಟೋ ಒಂದರಲ್ಲಿ ಆರೋಪಿಗಳು ಹಾರಗಳನ್ನು ಧರಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡಲು ಪೊಲೀಸರ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ.
ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ. ಗೋಯಲ್ ಮತ್ತು ಚೌಧರಿ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.








