ಬೆನ್ನು ನೋವು ಎಂದಿದ್ದ ದರ್ಶನ್‌ಗೆ ಅಲೋಕ್ ಕುಮಾರ್ ಸಲಹೆ : ಜೈಲಿನಲ್ಲಿ ಪ್ರಾಣಾಯಾಮ, ಶವಾಸನ ಮಾಡಿದ ದಾಸ-ಕಹಳೆ ನ್ಯೂಸ್

ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೂ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಲೆ ಪ್ರಕರಣದ ಆರೋಪಿಯಾಗಿ ಸದ್ಯ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಈ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ಕಾರಾಗೃಹದ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಆದರೆ, ತಮಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಇದೆ ಎಂದು ಹೇಳಿದ್ದ ನಟ ದರ್ಶನ್, ಆರಂಭದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದರು.
ಈ ವಿಷಯ ತಿಳಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಕಚೇರಿಗೆ ಕರೆಸಿಕೊಂಡು ಮಾತನಾಡಿದರು.”ಬೆನ್ನು ನೋವಿನ ಸಮಸ್ಯೆ ಇದ್ದರೆ ಯೋಗ ಮಾಡುವುದರಿಂದಲೇ ಅದು ಗುಣವಾಗುತ್ತದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು” ಎಂದು ದರ್ಶನ್ ಅವರಿಗೆ ಮನವರಿಕೆ ಮಾಡಿಕೊಟ್ಟು, ಯೋಗ ಮಾಡುವಂತೆ ಸಲಹೆ ನೀಡಿದರು.










